ಬೆಂಗಳೂರು: ಏಪ್ರಿಲ್ ನಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ವ್ಯವಸ್ಥೆ ಸಂಪೂರ್ಣವಾಗಿ ಡಿಜಿಟಲ್ ಮಯವಾಗಲಿದೆ. ಏಪ್ರಿಲ್ 1, ರಿಂದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಯನ್ನು ಸಂಪೂರ್ಣವಾಗಿ ನಿಲ್ಲಿಸಲು ನಿರ್ಧರಿಸಲಾಗಿದೆ.
ಈ ಬಗ್ಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಾಹಿತಿ ಹಂಚಿಕೊಂಡಿದ್ದು, ದೇಶದಲ್ಲಿ ಸಂಪೂರ್ಣ ಡಿಜಿಟಲ್ ಟೋಲಿಂಗ್ ವ್ಯವಸ್ಥೆ ರೂಪಿಸುವುದು ಮುಖ್ಯ ಉದ್ದೇಶವಾಗಿದೆ. ವಾಹನ ಸವಾರರು ಟೋಲ್ ಶುಲ್ಕವನ್ನು ಕೇವಲ ಡಿಜಿಟಲ್ ವಿಧಾನಗಳಾದ ಫಾಸ್ಟ್ ಟ್ಯಾಗ್ ಅಥವಾ ಯುಪಿಐ ಮೂಲಕವೇ ಪಾವತಿ ಮಾಬೇಕಾಗುತ್ತದೆ.
ಈಗಾಗಲೇ ದೇಶದ ಬಹುತೇಕ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಾಗಿದ್ದು, ನಗದು ಪಾವತಿ ಬಹುತೇಕ ಕಡಿಮೆಯಾಗಿದೆ. ಈ ವ್ಯವಸ್ಥೆಯಿಂದ ವಹಿವಾಟುಗಳಲ್ಲಿ ಸ್ಥಿರತೆ ಹೆಚ್ಚುವುದರ ಜತೆಗೆ ಸಮಯ ಉಳಿತಾಯ ಆಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ನಗದು ಪಾವತಿ ನಿಲ್ಲಿಸುವ ಉದ್ದೇಶ:
ಟೋಲ್ ಪ್ಲಾಜಾಗಳಲ್ಲಿ ವಾಹನ ದಟ್ಟಣೆ ಕಡಿಮೆ ಮಾಡುವುದು, ವಾಹನ ಸಂಚಾರವನ್ನು ಸರಾಗಗೊಳಿಸುವುದು ಮತ್ತು ಪಾವತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಈ ಕ್ರಮಕ್ಕೆ ಮುಂದಾಗಿದೆ.
ಪ್ರಯಾಣಿಕರು ತಮ್ಮ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳಬೇಕು. ಇಲ್ಲವೇ ಯುಪಿಐ ಸೌಲಭ್ಯವನ್ನು ಸಕ್ರಿಯಗೊಳಿಸಬೇಕು.