2026-03-07 05:05:15

Chalavadi Narayanaswamy challenges Vokkaliga Lingayat | ದಲಿತರ ಹಣ ಮಾತ್ರ ಏಕೆ ಒಕ್ಕಲಿಗ ಲಿಂಗಾಯತ ನಿಗಮದ ಹಣ ಗ್ಯಾರಂಟಿಗೆ ಬಳಸಲು ಛಲವಾದಿ ನಾರಾಯಣಸ್ವಾಮಿ ಸವಾಲು | Speed News Kannada

Chalavadi Narayanaswamy challenges Vokkaliga Lingayat  | ದಲಿತರ ಹಣ ಮಾತ್ರ ಏಕೆ ಒಕ್ಕಲಿಗ ಲಿಂಗಾಯತ ನಿಗಮದ ಹಣ ಗ್ಯಾರಂಟಿಗೆ ಬಳಸಲು ಛಲವಾದಿ ನಾರಾಯಣಸ್ವಾಮಿ ಸವಾಲು | Speed News Kannada

ಬೆಂಗಳೂರು: ಪರಿಶಿಷ್ಟ ಜಾತಿ, ವರ್ಗಕ್ಕೆ ಬಳಸಬೇಕಾದ ಎಸ್‍ಇಪಿ, ಟಿಎಸ್‍ಪಿ ಹಣದ ವಿಚಾರದಲ್ಲಿ ಸರಕಾರ 3 ವರ್ಷಗಳಲ್ಲಿ 39 ಸಾವಿರ ಕೋಟಿ ರೂ.ಗಳನ್ನು ಅನ್ಯ ಉದ್ದೇಶಕ್ಕೆ ಬಳಸಿದ್ದನ್ನು ಎಲ್ಲ ದಲಿತ ಸಂಘಟನೆಗಳು ಸೇರಿ ಖಂಡಿಸಿದ್ದೇವೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ಸುಮಾರು 60ಕ್ಕೂ ಹೆಚ್ಚು ಸಂಘಟನೆಗಳು ಇಂದಿನ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಪ್ರತಿಯೊಬ್ಬರೂ ಇದನ್ನು ಹೇಳಿದ್ದಾರೆ. ಈ ಸರಕಾರ ದಲಿತರಿಗೆ ದೋಖಾ, ವಂಚನೆ ಮಾಡುತ್ತಿದೆ ಎಂದಿದ್ದಾರೆ. ಆದ್ದರಿಂದ ಈ ಸರಕಾರದ ವಿರುದ್ಧ ದೊಡ್ಡ ಹೋರಾಟ ರೂಪಿಸಬೇಕೆಂಬ ಮಾತನ್ನು ಒಕ್ಕೊರಲಿನಿಂದ ಹೇಳಿದ್ದಾರೆ ಎಂದರು.
ಗ್ಯಾರಂಟಿಗಳಿಗೆ ಒಂದು ವರ್ಷಕ್ಕೆ 52 ಸಾವಿರ ಕೋಟಿ ಬೇಕು. 52 ಸಾವಿರ ಕೋಟಿ ನೀವು ಬಜೆಟ್‍ನಲ್ಲಿ ತೆಗೆದಿಟ್ಟ ಮೇಲೆ ಎಸ್‍ಇಪಿ, ಟಿಎಸ್‍ಪಿ ಹಣ ಅದಕ್ಕೆ ಯಾಕೆ ಬೇಕು ಎಂದು ಪ್ರಶ್ನಿಸಿದರು. ನೀವು ಒಕ್ಕಲಿಗ ಸಮುದಾಯದ ಹೆಣ್ಮಕ್ಕಳಿಗೆ 2 ಸಾವಿರ ರೂ. ಕೊಡುತ್ತೀರಿ. ಅದನ್ನು ಒಕ್ಕಲಿಗ ಅಭಿವೃದ್ಧಿ ನಿಗಮದಿಂದ ತೆಗೆದು ಕೊಡುತ್ತಿದ್ದೀರಾ ಎಂದು ಕೇಳಿದರು. ಲಿಂಗಾಯತರಿಗೆ ಕೊಡುವುದನ್ನು ಅವರ ಅಭಿವೃದ್ಧಿ ನಿಗಮದಿಂದ ತೆಗೆದು ಕೊಡುತ್ತಿದ್ದೀರಾ ಎಂದು ಪ್ರಶ್ನಿಸಿದರು.
ಮುಸ್ಲಿಮರಿಗೆ ಕೊಡುವ ಗ್ಯಾರಂಟಿ ಹಣವನ್ನು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ತೆಗೆದು ಕೊಡುತ್ತೀರಾ ಎಂದು ಕೇಳಿದರು. ಪರಿಶಿಷ್ಟ ಜಾತಿ, ವರ್ಗಗಳಿಗೆ ಕೊಡುವಾಗ ಅವರ ಹಣ ತೆಗೆದು ಯಾಕೆ ಕೊಡುತ್ತೀರಿ ಎಂಬ ವಿಷಯವನ್ನು ಎಲ್ಲ ಮುಖಂಡರು ಮಾತನಾಡಿದರು ಎಂದರು.
ಎಸ್‍ಇಪಿ, ಟಿಎಸ್‍ಪಿ ಹಣ 42 ಸಾವಿರ ಕೋಟಿ ಎಂದು ಜನರಿಗೆ ತೋರಿಸುತ್ತೀರಿ. ಇದರಲ್ಲಿ 34 ಇಲಾಖೆಗಳಿವೆ. 21 ಸಾವಿರ ಕೋಟಿ ಅವುಗಳಿಗೆ ಕೊಡುತ್ತೀರಿ. ಉಳಿದ 21 ಸಾವಿರ ಕೋಟಿಯಲ್ಲಿ 14 ಸಾವಿರ ಕೋಟಿಯನ್ನು ಗ್ಯಾರಂಟಿಗಳಿಗೆ ಬಳಸಿದರೆ ಉಳಿಯುವುದು 7 ಸಾವಿರ ಕೋಟಿ. ಅಂದರೆ ಪರಿಶಿಷ್ಟ ಜಾತಿ, ಪಂಗಡಕ್ಕೆ ಸಿಗುವ ಎಸ್‍ಇಪಿ, ಟಿಎಸ್‍ಪಿ ಹಣ ಕೇವಲ 7 ಸಾವಿರ ಕೋಟಿ. 42 ಸಾವಿರ ಕೋಟಿ ಎಂದು ಯಾಕೆ ಹೇಳುತ್ತೀರಿ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ದುಂಡುಮೇಜಿನ ಸಭೆ: ಎಸ್‍ಸಿಎಸ್‍ಪಿ-ಟಿಎಸ್‍ಪಿ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸುವ  ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು “ಶಾಸಕರ ಭವನದ ಸಭಾಂಗಣದಲ್ಲಿ” ಬಜೆಟ್ ಪೂರ್ವ ದುಂಡು ಮೇಜಿನ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಕೇಂದ್ರ ಮಾಜಿ ಸಚಿವ ಎ. ನಾರಾಯಣಸ್ವಾಮಿ, ಮಾಜಿ ಸಚಿವ ಎನ್. ಮಹೇಶ್, ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ್ ಮತ್ತು ಪ್ರಮುಖರು ಉಪಸ್ಥಿತರಿದ್ದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.