ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಇಂದು ವಿಧಾನಸೌಧದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಹಲವು ಜನಪರ ಯೋಜನೆಗಳು ಹಾಗೂ ಪ್ರಮುಖ ಆಡಳಿತಾತ್ಮಕ ತೀರ್ಮಾನಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ. ಈ ಸಭೆಯಲ್ಲಿ ಮುಖ್ಯವಾಗಿ, ಕೇಂದ್ರ ಸರ್ಕಾರದ ಪರಿಷ್ಕೃತ ನಿಯಮಗಳಿಂದ ಉದ್ಯೋಗ ಖಾತರಿ ಯೋಜನೆ (VB-G RAM G) ಅನುಷ್ಠಾನದಲ್ಲಿ ರಾಜ್ಯದ ಮೇಲಾಗಿರುವ ಆರ್ಥಿಕ ಹೊರೆಯನ್ನು ನಿಭಾಯಿಸುವ ಕುರಿತು ಗ್ರಾಮೀಣಾಭಿವೃದ್ಧಿ ಸಚಿವರ ಸಮ್ಮುಖದಲ್ಲಿ ಸಮಾಲೋಚನೆ ನಡೆಸಲಾಗುತ್ತದೆ. ಇದರೊಂದಿಗೆ, ವಿದ್ಯುತ್ ವಲಯಕ್ಕೆ ಖಾಸಗಿ ಸಂಸ್ಥೆಗಳ ಪ್ರವೇಶವನ್ನು ನಿರ್ಬಂಧಿಸುವ ಸರ್ಕಾರದ ನಿಲುವಿನ ಬಗ್ಗೆಯೂ ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.
ಇನ್ನು, ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿರುವುದರಿಂದ, ಶೀಘ್ರದಲ್ಲೇ ದೆಹಲಿಗೆ ಭೇಟಿ ನೀಡಿ ಹೈಕಮಾಂಡ್ ಜೊತೆ ಚರ್ಚಿಸುವ ಮುನ್ನ ಸಂಪುಟದೊಳಗಿನ ಜಾತಿ ಹಾಗೂ ಪ್ರಾದೇಶಿಕ ಸಮೀಕರಣಗಳ ಬಗ್ಗೆ ಪ್ರಾಥಮಿಕ ಚರ್ಚೆಗಳು ನಡೆಯಬಹುದು. ಜೊತೆಗೆ, ಕರಾವಳಿ ಭಾಗದಲ್ಲಿ ಏಕಗವಾಕ್ಷಿ ಯೋಜನೆ ಜಾರಿ ಹಾಗೂ ಪರಿಸರಸ್ನೇಹಿ ಪ್ರವಾಸೋದ್ಯಮ ಹೂಡಿಕೆಗೆ ಉತ್ತೇಜನ ನೀಡುವ ಪ್ರಸ್ತಾವನೆಗಳೂ ಇಂದಿನ ಸಭೆಯಲ್ಲಿ ಅನುಮೋದನೆ ಪಡೆಯುವ ಸಾಧ್ಯತೆಯಿದೆ ಇಷ್ಟೇ ಅಲ್ದೆ ಇನ್ನೂ ಅನೇಕ ವಿಚಾರಗಳ ಕುರಿತು ಸಂಪುಟ ಸಭೆ ಭಾರಿ ನಿರೀಕ್ಷೆ ಹುಟ್ಟಿಸಿದ್ದು,.ಹೊಸ ಸರ್ಕಾರದ ದಿಕ್ಸೂಚಿಯನ್ನು ನಿರ್ಧರಿಸಲಿರುವ ಇಂದಿನ ಸಂಪುಟ ಸಭೆಯು ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ಭಾರಿ ಕುತೂಹಲವನ್ನು ಕೆರಳಿಸಿದೆ. ಇನ್ನೂ, ಸಂಪುಟ ಸಭೆ ಬಳಿಕ ಸಿಎಂ ಡಿಕೆಶಿ ದಿಲ್ಲಿಗೆ ಹಾರಲಿದ್ದು, ಕಾಂಗ್ರೆಸ್ ವರಿಷ್ಠರನ್ನು ಭೇಟಿಯಾಗಿ ಮಾತುಕತೆ ಮಾಡಿಸಲಿದ್ದಾರೆ. ಈಗಾಗಲೇ ನೂತನ ಸಚಿವರ ಲಿಸ್ಟ್ ರೆಡಿಯಿದ್ದು, ಒಂದು ಸುತ್ತಿನ ಮಾತುಕತೆ ಬಳಿಕ ಎಲ್ಲವೂ ಫೈನಲ್ ಆಗಲಿದೆ. ಬಹುತೇಕ ಜುಲೈ 8 ಅಥವಾ 10ಕ್ಕೆ ಸಂಪುಟ ವಿಸ್ತರಣೆ ಆಗುವ ನಿರೀಕ್ಷೆಯಿದೆ.