2026-06-08 01:27:22

ಮೇ ಅಂತ್ಯದೊಳಗೆ ಸಂಪುಟ ವಿಸ್ತರಣೆ ಸಾಧ್ಯತೆ: ಭವಿಷ್ಯ ನುಡಿದ ಸಿಎಂ ಸಲಹೆಗಾರ|Speed News Kannada

 ಮೇ ಅಂತ್ಯದೊಳಗೆ ಸಂಪುಟ ವಿಸ್ತರಣೆ ಸಾಧ್ಯತೆ: ಭವಿಷ್ಯ ನುಡಿದ ಸಿಎಂ ಸಲಹೆಗಾರ|Speed News Kannada

ಕೊಪ್ಪಳ: ರಾಜ್ಯದಲ್ಲಿ ಸಂಪುಟ ಪುನರ್‌ ರಚನೆ ಅಥವಾ ವಿಸ್ತರಣೆ ಮೇ 30ರ ಒಳಗೆ ನಡೆಯಬಹುದು ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲವೇ ದಿನಗಳಲ್ಲಿ ಪಕ್ಷದ ವರಿಷ್ಠ, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ ಎಂದೂ ತಿಳಿಸಿದ್ದಾರೆ. ಇಂದು ಇಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಈ ಸರ್ಕಾರದ ಅವಧಿ ಪೂರ್ಣಗೊಳ್ಳುವವರೆಗೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂಬ ನಂಬಿಕೆ ನನ್ನದು. ಪದೇ ಪದೇ ಮುಖ್ಯಮಂತ್ರಿ ಬದಲಾವಣೆ ಮಾಡುವುದು ಸರಿಯಾದ ಕ್ರಮ ಅಲ್ಲ. ಸಂಪುಟ ಪುನರ್‌ ರಚನೆಯಾದರೆ ಉಳಿದ ಎರಡು ವರ್ಷಗಳ ಅವಧಿಯಲ್ಲಿ ಪರಿಣಾಮಕಾರಿಯಾದ ಆಡಳಿತ ಜನರಿಗೆ ನೀಡಬಹುದು. ನಮ್ಮಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು 2028ರಲ್ಲಿಯೂ ಅಧಿಕಾರಕ್ಕೆ ಬರಬಹುದು ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿಯೇ ಮುಂಬರುವ 2028ರ ಚುನಾವಣೆ ಎದುರಿಸುತ್ತೇವೆ. ಸಿದ್ದರಾಮಯ್ಯ ಅವರಷ್ಟೇ ಆಡಳಿತದ ಅನುಭವ ಹೊಂದಿರುವ ಮಲ್ಲಿಕಾರ್ಜುನ ಖರ್ಗೆ ಅಂಥವರು  ಮುಖ್ಯಮಂತ್ರಿಯಾಗಬೇಕು ಎಂದರು.

ಸಚಿವ ಸ್ಥಾನ ನೀಡುವಂತೆ ಕೇಳಿದ್ದೀರಾ ಎಂಬ ಪ್ರಶ್ನೆಗೆ ದೇವರಾಣೆಗೂ ಕೇಳಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ಯುದ್ಧವನ್ನು ನೆಪವಾಗಿಟ್ಟುಕೊಂಡು ಪೆಟ್ರೋಲ್‌,ಡಿಸೇಲ್‌, ಸಿಎನ್‌ ಜಿ ಮತ್ತು ಅಡುಗೆ ಅನಿಲದ ಬೆಲೆ ಹೆಚ್ಚಳ ಮಾಡಿದ್ದಾರೆ. ದೇಶದ ರೂಪಾಯಿ ಮೌಲ್ಯ ಕುಸಿತವಾಗಿದ್ದು ಮೋದಿ ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ಅವರು ರಾಜೀನಾಮೆ ಕೊಡಬೇಕು. ಆರ್ಥಿಕ ತಜ್ಞರೊಬ್ಬರು ಪ್ರಧಾನಿಯಾಗಬೇಕು ಎಂದು ಒತ್ತಾಯಿಸಿದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.