ಬೆಂಗಳೂರಿನ ಅಗತ್ಯ ಸಾರಿಗೆ ಸೇವೆಗಳಲ್ಲಿ ಬಿಎಂಟಿಸಿ ಕೂಡಾ ಒಂದು. ಸಾವಿರಾರು ಬಸ್‌ಗಳನ್ನು ಹೊಂದಿರುವ ಬಿಎಂಟಿಸಿ, ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಬೆಂಗಳೂರಿನಾದ್ಯಂತ ಸಂಚಾರ ಮಾಡುತ್ತದೆ. ಅಲ್ಲದೇ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ. ಇದೀಗ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ (PUC Exam) ಹತ್ತಿರ ಬರುತ್ತಿದ್ದಂತೆ, ಬಿಎಂಟಿಸಿ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.ಅದೇನೆಂದರೆ, ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ ವೇಳೆ ಉಚಿತವಾಗಿ ಬಿಎಂಟಿಸಿ ಬಸ್‌ಗಳಲ್ಲಿ ಸಂಚಾರ ಮಾಡಬಹುದು. 2025-26ನೇ ಸಾಲಿನ ಪಿಯುಸಿ ಪರೀಕ್ಷೆ-1ರಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಒಂದಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪರೀಕ್ಷಾ ಕೇಂದ್ರಗಳಿಗೆ ಉಚಿತ ಪ್ರಯಾಣ ಸೇವೆಯನ್ನು ಜಾರಿಗೆ ತಂದಿದೆ.
ಯಾವಾಗಿನಿಂದ ಆರಂಭ? ಫೆಬ್ರವರಿ 28, 2026 ರಿಂದ ಮಾರ್ಚ್ 17, 2026 ರವರೆಗೆ ನಡೆಯಲಿರುವ ಪಿಯುಸಿ ಪರೀಕ್ಷೆ-1 ಸಂದರ್ಭದಲ್ಲಿ ಬಿಎಂಟಿಸಿ ಜನರಲ್ ಬಸ್‌ಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಉಚಿಯವಾಗಿ ಪ್ರಯಾಣ ಮಾಡಬಹುದು. ಇದಕ್ಕಾಗಿ ವಿದ್ಯಾರ್ಥಿಗಳು ಕೇವಲ ಪರಿಕ್ಷಾ ಹಾಲ್ ಟಿಕೆಟ್ ಅಥವಾ ಅಡ್ಮಿಷನ್ ಟಿಕೆಟ್ ತೋರಿಸಿದರೆ ಸಾಕು. ಅದಕ್ಕಾಗಿ ಯಾವುದೇ ಬಸ್ ಪಾಸ್ ಅಥವಾ ಟಿಕೆಟ್ ಖರೀದಿಸುವ ಅಗತ್ಯವಿಲ್ಲ.
ಬಿಎಂಟಿಸಿಯಿಂದ ಅಧಿಕೃತ ಘೋಷಣೆ: ಉಚಿತ ಬಸ್ ಪ್ರಯಾಣ: ಪರೀಕ್ಷಾ ದಿನಗಳಲ್ಲಿ ಮಾತ್ರ ಈ ಸೌಲಭ್ಯವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬಹುದು. ಇನ್ನು ಪರೀಕ್ಷಾ ಕೇಂದ್ರಕ್ಕೆ ಹೋಗುವಾಗ ಮತ್ತು ಹಿಂತಿರುಗುವಾಗ ಮಾತ್ರ ಈ ಸೇವೆ ಉಚಿತವಾಗಿದೆ.
ಅಗತ್ಯವಿದ್ದರೆ ಹೆಚ್ಚುವರಿ ಟ್ರಿಪ್: ವಿದ್ಯಾರ್ಥಿಗಳ ಬೇಡಿಕೆಯ ಆಧಾರದ ಮೇಲೆ ಹೆಚ್ಚುವರಿ ಬಸ್ ಬೇಕಾ, ಬೇಡ್ಯಾ ಎಂದು ನಿರ್ಧರಿಸಲಾಗುತ್ತದೆ.
ಪರೀಕ್ಷಾ ಕೇಂದ್ರಗಳ ಬಳಿ ರಿಕ್ವೆಸ್ಟ್ ಸ್ಟಾಪ್: ಇನ್ನು ಪರೀಕ್ಷಾ ಕೇಂದ್ರಗಳ ಬಳಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಿಕ್ವೆಸ್ಟ್ ಸ್ಟಾಪ್ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೊಠಡಿಗೆ, ಪರೀಕ್ಷೆಗೆ ತಯಾರಿ ನಡೆಸಲು ಅನುಕೂಲವಾಗಲಿದೆ.ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಿಎಂಟಿಸಿ ಸೇವೆ:
ಬಿಎಂಟಿಸಿ ಪ್ರತೀ ವರ್ಷವೂ ಇದೇ ರೀತಿಯ ವಿಶೇಷ ಕ್ರಮಗಳನ್ನು ಕೈಗೊಳ್ಳುತ್ತಲೇ ಇರುತ್ತದೆ. ಅದರಲ್ಲೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಿಎಂಟಿಸಿ ಈ ನಿರ್ಧಾರವನ್ನು ಕೈಗೊಂಡಿದೆ. ಇದಲ್ಲದೆ, ಬಿಎಂಟಿಸಿ ಶಾಲಾ-ಕಾಲೇಜುಗಳುಗೆ ಸಬ್ಸಿಡಿ ದರದಲ್ಲಿ ಬಸ್ ಪಾಸ್‌ಗಳನ್ನು ನೀಡುತ್ತಿದೆ. ಇದೀಗ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಅವಧಿಯಲ್ಲಿ ಉಚಿತ ಪ್ರಯಾಣ ಸೌಲಭ್ಯವನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲಿದೆ.
ಏನಿದು ಪಿಯುಸಿ ಪರೀಕ್ಷೆ-1?
ಪರೀಕ್ಷೆ -1 ಎಂದರೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEEB) 2023-24 ರಿಂದ ಪರಿಚಯಿಸಿದ ಹೊಸ ವ್ಯವಸ್ಥೆ ಇದಾಗಿದೆ. ಇದು ಪಿಯುಸಿ ವಿದ್ಯಾರ್ಥಿಗಳು ಬರೆಯುವ ಫೈನಲ್ ಪರೀಕ್ಷೆಯಾಗಿದೆ.
ಈ ಹಿಂದೆ ಒಂದೇ ವಾರ್ಷಿಕ ಪರೀಕ್ಷೆ ಮತ್ತು ಸಪ್ಲಿಮೆಂಟರಿ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಆದ್ರೆ ಈಗ ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶ ನೀಡುವ ಉದ್ದೇಶದಿಂದ ಪ್ರತೀ ವರ್ಷ 3 ಪರೀಕ್ಷೆಗಳು ನಡೆಸುವಂತೆ ಈ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದು ವಿದ್ಯಾರ್ಥಿಗಳು ಅಂಕದ ಮೇಲೆ ನಿರ್ಧಾರವಾಗುತ್ತದೆ. ಮೊದಲ ಪರೀಕ್ಷೆಯಲ್ಲೇ ಪಾಸ್ ಆದರೆ ನಂತರದ ಪರೀಕ್ಷೆ ಅಟೆಂಡ್ ಆಗುವ ಅಗತ್ಯವಿಲ್ಲ. ಆದರೆ ಹೆಚ್ಚುವರಿ ಅಂಕ ಬೇಕು ಎಂದಾದರೆ, ಅದನ್ನೂ ಬರೆಯಬಹುದು.