ಬೆಂಗಳೂರು: ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಕೆಲವೇ ಗಂಟೆಗಳಿರುವಾಗ ಕರ್ನಾಕಟ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ನೂತನ ಸಾರಥಿಯನ್ನು ಹೈಕಮಾಂಡ್ ಆಯ್ಕೆ ಮಾಡಿದೆ. ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಅವರನ್ನು ಕೆಪಿಸಿಸಿ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಹೈಕಮಾಂಡ್ ಒಲವು ತೋರಿಸಿದೆ.
ಈ ತಿಂಗಳಲ್ಲಿ ಹರಿಪ್ರಸಾದ್ ನಿವೃತ್ತರಾಗಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜತೆಗೆ ಮತ್ತೊಂದು ಅವಧಿಗೆ ಅವರನ್ನು ಮೇಲ್ಮನೆಗೆ ನೇಮಿಸುವುದಾಗಿಯೂ ಹೈಕಮಾಂಡ್ ಭರವಸೆ ನೀಡಿದೆ.
ಇಂದು ಬೆಳಗ್ಗೆಯಷ್ಟೇ ವರಿಷ್ಠರೊಬ್ಬರು ಹರಿಪ್ರಸಾದ್ ಅವರಿಗೆ ಕರೆ ಮಾಡಿ ಈ ವಿಷಯ ತಿಳಿಸಿದ್ದಾರೆ. ಇದುವರೆಗೂ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಆದರೆ ಹೈಕಮಾಂಡ್ ಆಯ್ಕೆಯೇ ಬೇರೆಯಾಗಿದೆ.
ಬಿಕೆ ಹರಿಪ್ರಸಾದ್ ಅವರು ಪಕ್ಷ ಸಂಘಟನೆಯಲ್ಲಿ ಅನುಭವ ಹೊಂದಿದ್ದಾರೆ. ಹೀಗಾಗಿ ಅವರನ್ನು ಆಯ್ಕೆ ಮಾಡಲಾಗಿದೆ. ಮೇಲಾಗಿ ಇವರು ಶಿವಕುಮಾರ್ ಅವರಿಗೂ ಆಪ್ತರಾಗಿದ್ದಾರೆ. ಹಿಂದುಳಿದ ವರ್ಗಕ್ಕೆ ಸೂಕ್ತ ಸ್ಥಾನ ಮಾನ ನೀಡುವ ನಿಟ್ಟಿನಲ್ಲಿ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ.
ಸತೀಶ್ ಜಾರಕಿಹೊಳಿ ಆಯ್ಕೆಗೆ ಒಂದು ಬಣದ ವಿರೋಧ ಇದ್ದ ಕಾರಣ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ.
ಹರಿಪ್ರಸಾದ್ ಅವರು ಪಕ್ಷ ಸಂಘಟನೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. 1989-1990 ರಲ್ಲಿ ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. 1990,2004,2013 ಮತ್ತು 2014ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು