2026-03-07 06:15:30

BJPs final days are approaching | ಬಿಜೆಪಿ ಅಂತಿಮ ದಿನಗಳು ಸಮೀಪಿಸುತ್ತಿವೆ: ಡಿಸಿಎಂ ಡಿ ಕೆ ಶಿವಕುಮಾರ್ ವಾಗ್ದಾಳಿ | Speed News Kannada

BJPs final days are approaching | ಬಿಜೆಪಿ ಅಂತಿಮ ದಿನಗಳು ಸಮೀಪಿಸುತ್ತಿವೆ: ಡಿಸಿಎಂ ಡಿ ಕೆ ಶಿವಕುಮಾರ್ ವಾಗ್ದಾಳಿ | Speed News Kannada

ಬೆಂಗಳೂರು:“ದೀಪ ಆರುವಾಗ ಜೋರಾಗಿ ಉರಿಯುತ್ತದೆ. ಅದೇ ರೀತಿ ಬಿಜೆಪಿಯ ಅಂತಿಮ ದಿನಗಳು ಸಮೀಪಿಸಿರುವ ಕಾರಣ, ಮಹಾತ್ಮಾ ಗಾಂಧಿ ಅವರ ಹೆಸರು ಬದಲಿಸುವ ಕೆಲಸಕ್ಕೆ ಮುಂದಾಗಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸೋಮವಾರ ನಡೆದ ಮನರೇಗಾ ಬಚಾವೋ ಸಂಗ್ರಾಮ ಪ್ರತಿಭಟನಾ ಸಮಾವೇಶದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.
“ಈ ದೇಶ ಉಳಿಸಲು ಇಂದು ನಾವು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಪಕ್ಷ ಸದಾ ಎಲ್ಲಾ ವರ್ಗದ ಜನರಿಗೆ ಕಾರ್ಯಕ್ರಮ ನೀಡುತ್ತಾ ಬದುಕಿನಲ್ಲಿ ಬದಲಾವಣೆ ತರುವ ಕೆಲಸ ಮಾಡಿಕೊಂಡು ಬರುತ್ತಿದೆ. ಮಹಾತ್ಮ ಗಾಂಧಿ ಅವರ ಹೆಸರಿನಲ್ಲಿ 20 ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರವು ಬಡವರಿಗಾಗಿ ಉದ್ಯೋಗ ಖಾತರಿ ಕಾರ್ಯಕ್ರಮ ನೀಡಿತ್ತು. ಇದು ದೇಶದ ಪಾಲಿಗೆ ಕ್ರಾಂತಿಕಾರಿ ಕಾರ್ಯಕ್ರಮ” ಎಂದು ತಿಳಿಸಿದರು.
“ಈ ಕಾರ್ಯಕ್ರಮದಲ್ಲಿ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ಯಾವ ಕಾಮಗಾರಿ ಮಾಡಬೇಕು ಎಂಬ ತೀರ್ಮಾನ ಮಾಡುವ ಅಧಿಕಾರ ಹೊಂದಿದ್ದವು. ಹಸಿದ ಹೊಟ್ಟೆ, ಖಾಲಿ ಜೇಬಿನ ನೋವು ಏನು ಎಂಬುದು ನಮಗೆ ಅರಿವಿದೆ. 60% ಗ್ರಾಮೀಣ ಭಾಗದ ಮಹಿಳೆಯರು ಕೂಲಿ ಮಾಡುತ್ತಿದ್ದಾರೆ. ರಾಜ್ಯದಲ್ಲಿರುವ 5900 ಪಂಚಾಯ್ತಿಗಳಲ್ಲಿ, ಕನಿಷ್ಠ 1-2 ಕೋಟಿಯಷ್ಟು ಹಣವನ್ನು ಪಂಚಾಯಿತಿಗಳಲ್ಲಿ ನೀಡಿ ಅಲ್ಲಿ ಶಾಶ್ವತ ಆಸ್ತಿ ಸೃಷ್ಟಿಸಿ ಜನರಿಗೆ ಉದ್ಯೋಗ ಕಲ್ಪಿಸಲಾಗುತ್ತಿತ್ತು. ಮನರೇಗಾ ಉಳಿಸುವ ಮೂಲಕ, ಹಳ್ಳಿಗಳು, ಈ ದೇಶ, ಕಾರ್ಮಿಕರು, ಪಂಚಾಯಿತಿಗಳು ಹಾಗೂ ಮಹಾತ್ಮ ಗಾಂಧಿ ಅವರ ಹೆಸರು ಉಳಿಸಬೇಕಾಗಿದೆ” ಎಂದು ಕರೆ ನೀಡಿದರು.
ಕೇಂದ್ರ ಸರ್ಕಾರದ ನೂತನ ಕಾನೂನು ಮರಣ ಶಾಸನ:
“ಕನ್ನಡಿಗರ ಮೇಲೆ, ಬಡವರ ಮೇಲೆ ಅನ್ಯಾಯ ನಡೆಯುತ್ತಿದೆ. ಈಗ ಹೊಸ ಯೋಜನೆಯಲ್ಲಿ ರಾಜ್ಯ ಸರ್ಕಾರ 40% ಅನುದಾನ ಭರಿಸಬೇಕಾಗಿದೆ. ಬಿಜೆಪಿ ಆಡಳಿತ ಯಾವುದೇ ರಾಜ್ಯಗಳಲ್ಲಿ ಈ ಯೋಜನೆ ಜಾರಿಯಾಗುವುದಿಲ್ಲ. ನೆರೆ ರಾಜ್ಯ ಚಂದ್ರಬಾಬು ನಾಯ್ಡು ಅವರು ನಮ್ಮಿಂದ ಸಾಧ್ಯವಿಲ್ಲ ಎಂದಿದ್ದಾರೆ. ಇದರಿಂದ ಸರ್ಕಾರ ಬಿದ್ದು ಹೋಗುವ ಭಯದಿಂದ ಅವರಿಗೆ ಓಲೈಕೆ ಮಾಡುತ್ತಿದ್ದಾರೆ. ಈ ಬಡವರ ರಕ್ಷಣೆಗೆ ನಾವು ಹೋರಾಟ ಮಾಡಬೇಕಿದೆ. ಮರದಿಂದ ಬಿದ್ದ ಹೂವು ಯಾವತ್ತು ಅರಳುವುದಿಲ್ಲ. ನಮ್ಮ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆ ಕಾರ್ಯಕ್ರಮ ನೀಡಿದ್ದು ಕಾರ್ಮಿಕರ ಪ್ರತಿನಿತ್ಯದ ಬದುಕಿಗಾಗಿ. ಅವರ ಹೊಟ್ಟೆ ತುಂಬಿಸಲು. ಆದರೆ ಕೇಂದ್ರ ಸರ್ಕಾರದ ಈ ನೂತನ ಕಾನೂನು ಮರಣ ಶಾಸನವಾಗಿದೆ” ಎಂದು ಕಿಡಿಕಾರಿದರು.
ನೀವು ಇಂದು ಈ ಹೋರಾಟಕ್ಕೆ ಹೆಜ್ಜೆ ಹಾಕಿದ್ದು, ಬಡತನದ ಅನುಭವವಿರುವವರಿಗೆ ಮಾತ್ರ ಅನ್ನದ ಬೆಲೆ ಗೊತ್ತಿದೆ. ಮನರೇಗಾ ಕೂಡ ಉದ್ಯೋಗ ಗ್ಯಾರಂಟಿ ನೀಡುವ ಯೋಜನೆಯಾಗಿತ್ತು ಎಂದರು. 
ದೇಶದಲ್ಲಿ ಮಹಾತ್ಮಾ ಗಾಂಧಿ ಹೆಸರು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಗಾಂಧಿ ಅವರು ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸಿಕೊಂಡು ನೂರು ವರ್ಷವಾಗಿದೆ. ಅವರು ಅಧಿಕಾರ ವಹಿಸಿಕೊಂಡ ಬಳಿಕ ಕಾಂಗ್ರೆಸ್ ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು, ಈ ದೇಶಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ ನೀಡಿದೆ. ಮನರೇಗಾ ನಾಶವಾಗಲು ಬಿಡುವುದಿಲ್ಲ, ರೈತರ ಉದ್ಯೋಗ ಕಿತ್ತುಕೊಳ್ಳಲು ಅವಕಾಶ ಕೊಡುವುದಿಲ್ಲ” ಎಂದು ಭರವಸೆ ನೀಡಿದರು. 
“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ಹಕ್ಕು ಕಸಿಯುವ ಪ್ರಯತ್ನದಂತೆ, ಉದ್ಯೋಗದ ಹಕ್ಕನ್ನು ಕಸಿಯಲಾಗುತ್ತಿದೆ. ನಮ್ಮ ತಾಲ್ಲೂಕಿನಲ್ಲಿ ವರ್ಷಕ್ಕೆ 5 ಕೋಟಿಯಷ್ಟು ಅನುದಾನ ಬಳಸಿಕೊಂಡು ಕೆಲಸ ಮಾಡಿರುವುದಕ್ಕೆ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿದೆ. ಬಡವರ ಬದುಕಿಗೆ  ಉದ್ಯೋಗ ಖಾತ್ರಿ ಮೂಲಕ ಹೊಸ ರೂಪ ನೀಡಿದ್ದೇವೆ. 60 ಸಾವಿರ ಇಂಗು ಗುಂಡಿ, 54 ಸಾವಿರ ಕೊಟ್ಟಿಗೆ ನಿರ್ಮಾಣ ಮಾಡಿದ್ದೇವೆ. ನಿಮ್ಮದೇ ಜಮೀನಿನಲ್ಲಿ ಕೂಲಿ ಮಾಡಿಕೊಳ್ಳಲು, ಜಮೀನು ಮಟ್ಟ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದೇವೆ. ಇಂತಹ ಕಾರ್ಯಕ್ರಮವನ್ನು ಬದಲಾಯಿಸಲು ಅವಕಾಶ ನೀಡುವುದು ಬೇಡ. ನಮ್ಮ ಹೋರಾಟಕ್ಕೆ ನಿಮ್ಮ ಸಹಕಾರ ಬೇಕು” ಎಂದು ತಿಳಿಸಿದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.