ಬೆಳಗಾವಿ: ಬಿಜೆಪಿ ವಿಶೇಷ ರಾಜ್ಯ ಕಾರ್ಯಕಾರಿಣಿಯನ್ನು ಬೆಂಗಳೂರಿನ ಅರಮನೆ ಮೈದಾನದ ‘ಗಾಯತ್ರಿ ಗ್ರ್ಯಾಂಡ್’ ನಲ್ಲಿ ಇದೇ 19ರಂದು ನಡೆಯಲಿದೆ. ಪಕ್ಷದ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಈ ವಿಷಯ ತಿಳಿಸಿದ್ದಾರೆ.
ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾರ್ಯಕಾರಿಣಿಯಲ್ಲಿ ಕೆಲವು ಸಂಘಟನಾತ್ಮಕ ವಿಚಾರಗಳನ್ನು ಚರ್ಚಿಸಲಿದ್ದೇವೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳು, ಜಿಬಿಎ ಚುನಾವಣೆ, ಉಪ ಚುನಾವಣೆಗಳು, ಎಂಎಲ್‍ಸಿ ಚುನಾವಣೆಗಳು, ರಾಜ್ಯ ಸರಕಾರದ ವೈಫಲ್ಯಗಳು, ಕೇಂದ್ರ ಸರಕಾರದ ಸಾಧನೆ- ಇವೆಲ್ಲವನ್ನೂ ಚರ್ಚಿಸಲಿದ್ದೇವೆ ಎಂದು ಹೇಳಿದರು.
ರಾಜ್ಯ ಕಾರ್ಯಕಾರಿಣಿಯ ಉದ್ಘಾಟನೆಗೆ ಕೇಂದ್ರದ ಹಿರಿಯ ಸಚಿವರು ಬರಲಿದ್ದಾರೆ. ಸಮಾರೋಪ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರು ಆಗಮಿಸುತ್ತಾರೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ ರಾಜ್ಯದ ಜ್ವಲಂತ ಸಮಸ್ಯೆಗಳು, ಸರಕಾರದ ವೈಫಲ್ಯಗಳು, ಯಾವ ರೀತಿ ಈ ನಾಲಾಯಕ್ ಸರಕಾರ ಜನರಿಗೆ ಮೋಸ ಮಾಡುತ್ತಿದೆ- ಇವೆಲ್ಲ ವಿಚಾರಗಳ ಕುರಿತು ಚರ್ಚಿಸುತ್ತೇವೆ ಎಂದು ತಿಳಿಸಿದರು.
ಸರಕಾರದ ವೈಫಲ್ಯಗಳ ಬಗ್ಗೆ ಈಗಾಗಲೇ ನಾವು ಜನಜಾಗೃತಿ ಮೂಡಿಸುತ್ತಿದ್ದೇವೆ. ಇನ್ನೂ ಹೆಚ್ಚು ಮಾಡುವ ಕುರಿತು ಕಾರ್ಯೋನ್ಮುಖರಾಗುವ ಬಗ್ಗೆ ಚರ್ಚೆ ಮಾಡಿ ಅನುಷ್ಠಾನಕ್ಕೆ ತರುತ್ತೇವೆ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ವಿಪಕ್ಷವಾಗಿ ಈ ನಾಲಾಯಕ್ ಸರಕಾರದ ಕಿವಿ ಹಿಂಡುವ ಕೆಲಸ ಆಗಬೇಕಿದೆ. ಭ್ರಷ್ಟಾಚಾರದ ಕುರಿತು ಜನಜಾಗೃತಿ ಮೂಡಿಸಲು ನಾನು ನಮ್ಮೆಲ್ಲ ಮುಖಂಡರ ಜೊತೆ ರಾಜ್ಯ ಪ್ರವಾಸ ಮಾಡುವುದಾಗಿ ಅವರು ಹೇಳಿದರು.
ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯಾಧ್ಯಕ್ಷನಾಗಿ ಮುಖ್ಯಮಂತ್ರಿಗಳ ವಿರುದ್ಧ ತೊಡೆ ತಟ್ಟಿ, ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಿದ್ದೇನೆ. ಯಾವುದೇ ತಪ್ಪಿತಸ್ಥ ಸಚಿವರನ್ನು ಬೀದಿಗೆಳೆಯುವ ಕೆಲಸ ಮಾಡುತ್ತೇವೆ. ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಬೀದಿಗೆಳೆಯುವ ಕೆಲಸ ಮಾಡುತ್ತಿದ್ದೇನೆ ಎಂದು ಅವರು ತಿಳಿಸಿದರು.
ಶಾಸಕರು ಅನುದಾನ ಕೇಳಿದರೆ ವಿದೇಶ ಪ್ರವಾಸದ ಭಾಗ್ಯ:
ಮುಖ್ಯಮಂತ್ರಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ರಾಜ್ಯದ ಹಿತಾಸಕ್ತಿಯನ್ನು ಬಲಿ ಕೊಡುತ್ತಿದ್ದಾರೆ. ನುಡಿದಂತೆ ನಡೆದ ಸರಕಾರ ಎಂದು ಹೇಳಿಕೊಂಡು ಈ ರಾಜ್ಯದ ಗೌರವ ಹಾಳು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಏನೂ ಅಭಿವೃದ್ಧಿ ನಡೆಯುತ್ತಿಲ್ಲ ಎಂದು ತಿಳಿಸಿದರು. ಶಾಸಕರ ವಿದೇಶ ಪ್ರವಾಸ ಕುರಿತ ಪ್ರಶ್ನೆಗೆ ಉತ್ತರಿಸಿ, ಈ ಸರಕಾರ, ಮುಖ್ಯಮಂತ್ರಿಗಳ ಆದ್ಯತೆ ಏನೆಂದು ಇದರಿಂದ ಗೊತ್ತಾಗುತ್ತದೆ. ಶಾಸಕರು ಅನುದಾನ ಕೇಳಿದರೆ ವಿದೇಶ ಪ್ರವಾಸದ ಭಾಗ್ಯ ನೀಡಲು ಮುಖ್ಯಮಂತ್ರಿಗಳು ಹೊರಟಿದ್ದಾರೆ. ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ವಿದೇಶ ಪ್ರವಾಸಕ್ಕೆ ಕಳುಹಿಸಲು ಪ್ರಾರಂಭಿಸಿದ್ದಾರೆ ಎಂದು ನುಡಿದರು.