ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಬಿಹಾರದಿಂದ ರಾಜ್ಯಸಭೆ ಪ್ರವೇಶಿಸಲಿದ್ದಾರೆ. ರಾಜ್ಯಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಶಿವೇಶ್ ರಾಮ್ ಅವರೂ ಬಿಹಾರದಿಂದ ಕಣಕ್ಕಿಳಿಯಲಿದ್ದಾರೆ.
ಅಸ್ಸಾಂನಿಂದ ತೇರಶ್ ಗೋವಲ್ಲ ಮತ್ತು ಜೋಗೆನ್ ಮೋಹನ್, ಛತ್ತೀಸ್‌ಗಢದಿಂದ ಲಕ್ಷ್ಮಿ ವರ್ಮಾ, ಹರಿಯಾಣದಿಂದ ಸಂಜಯ್ ಭಾಟಿಯಾ, ಒಡಿಶಾದಲ್ಲಿ ಬಿಜೆಪಿ ಸುಜೀತ್ ಕುಮಾರ್ ಮತ್ತು ರಾಜ್ಯ ಘಟಕದ ಮುಖ್ಯಸ್ಥ ಮನಮೋಹನ್ ಸಮಲ್ ಅವರನ್ನು ನಾಮನಿರ್ದೇಶನ ಮಾಡಿದೆ. ಪಶ್ಚಿಮ ಬಂಗಾಳದಿಂದ ಬಿಜೆಪಿ ರಾಹುಲ್ ಸಿನ್ಹಾ ಅವರನ್ನು ಕಣಕ್ಕಿಳಿಸಿದೆ.
ಬಿಹಾರದ ಐವರು ರಾಜ್ಯಸಭಾ ಸದಸ್ಯರ ಅವಧಿ ಏಪ್ರಿಲ್‌ನಲ್ಲಿ ಕೊನೆಗೊಳ್ಳಲಿದೆ. ಉಪ ಸಭಾಪತಿ ಹರಿವಂಶ ನಾರಾಯಣ ಸಿಂಗ್, ಪ್ರೇಮಚಂದ್ ಗುಪ್ತಾ, ಕೇಂದ್ರ ಸಚಿವರಾದ ರಾಮನಾಥ್ ಠಾಕೂರ್, ಅಮರೇಂದ್ರ ಧರಿ ಸಿಂಗ್ ಮತ್ತು ಉಪೇಂದ್ರ ಕುಶ್ವಾಹ.
ಹರಿವಂಶ್ ನಾರಾಯಣ್ ಸಿಂಗ್ ಮತ್ತು ರಾಮನಾಥ್ ಠಾಕೂರ್ ಅವರು ಜೆಡಿಯು ಪಕ್ಷವನ್ನು ಪ್ರತಿನಿಧಿಸುತ್ತಿದ್ದರೆ ಪ್ರೇಮಚಂದ್ ಗುಪ್ತಾ ಮತ್ತು ಅಮರೇಂದ್ರ ಧಾರಿ ಸಿಂಗ್ ಅವರು ಆರ್‌ಜೆಡಿಯನ್ನು ಪ್ರತಿನಿಧಿಸುತ್ತಿದ್ದಾರೆ. ಉಪೇಂದ್ರ ಕುಶ್ವಾಹ ಅವರು ರಾಷ್ಟ್ರೀಯ ಲೋಕ ಮೋರ್ಚಾವನ್ನು ಪ್ರತಿನಿಧಿಸುತ್ತಿದ್ದಾರೆ.
ಈ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 5. ಮಾರ್ಚ್ 16ರಂದು ಮತದಾನ ನಡೆಯಲಿದೆ. ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ.