ಬೆಂಗಳೂರು: ರಾಜ್ಯದಲ್ಲಿ ಸಚಿವ ಸಂಪುಟ ದರ್ಜೆ ಹೊಂದಿದವರ ಪಟ್ಟಿಯನ್ನು ಬಿಡುಗಡೆ ಮಾಡಬೇಕೆಂದು ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಮುಖ್ಯ ಕಾರ್ಯದರ್ಶಿಗಳನ್ನು ಆಗ್ರಹಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರು ಇರಬಹುದು, ಹಣಕಾಸು ಸಲಹೆಗಾರರು, ರಾಜಕೀಯ ಕಾರ್ಯದರ್ಶಿ, ಕಾನೂನು ಸಲಹೆಗಾರರು, ಸಚಿವರು, ನಿಗಮ, ಮಂಡಳಿ ಅಧ್ಯಕ್ಷರು- ಇವರೆಲ್ಲ ಸೇರಿ ಎಷ್ಟು ಜನರು ಈ ಸ್ಥಾನಮಾನ ಪಡೆದಿದ್ದಾರೆ ಎಂಬ ಪಟ್ಟಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಅವರಿಗೆ ಎಷ್ಟು ಖರ್ಚಾಗುತ್ತದೆ ಎಂಬ ವಿವರ ನೀಡಬೇಕೆಂದು ಕೋರಿದರು.
ನಿಗಮಗಳ 54 ಜನರನ್ನು ಸಚಿವಸಂಪುಟ ದರ್ಜೆಗೆ ಏರಿಸಿದ್ದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದೆ. ಇದರ ಪರಿಣಾಮವಾಗಿ ಹಾಗೂ ಹಿಂದೆ ಸಚಿವರಲ್ಲದ ಅನೇಕರಿಗೆ ಸಚಿವಸಂಪುಟ ದರ್ಜೆ ಕೊಟಿದ್ದು, ಗ್ಯಾರಂಟಿಯ ರಾಜ್ಯದ ಜಾರಿ ಸಮಿತಿಯ ರಾಜ್ಯ ಸಮಿತಿ ಅಧ್ಯಕ್ಷರಿಗೂ ಇದೇ ಸ್ಥಾನಮಾನ ನೀಡಲಾಗಿದೆ. ಇವೆಲ್ಲ ಸೇರಿ ಕರ್ನಾಟಕದಲ್ಲಿ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನವನ್ನು ಸಿಎಂ ಸೇರಿ 150 ಜನರಿಗೆ ಕೊಡಲಾಗಿದೆ ಎಂದು ತಿಳಿಸಿದರು.
2003ರಲ್ಲಿ ಒಂದು ಕಾಯಿದೆ ಬಂದಿದೆ. ಆಡಳಿತ ಪಕ್ಷದ ಶೇ. 15 ಶಾಸಕರು ಮತ್ತು ಸಂಸದರನ್ನು ಮಾತ್ರ ಸಚಿವರನ್ನಾಗಿ ಮಾಡಬಹುದು. ಕರ್ನಾಟಕದಲ್ಲಿ 33 ಜನರಿಗೆ ಮಾತ್ರ ಮಂತ್ರಿಗಳಾಗಿ ಮಾಡಲು ಅವಕಾಶವಿದೆ. ಈ ಕಾರಣದಿಂದ ಈ ಸರಕಾರವು ಸಚಿವರಾಗಲು ಬಯಸಿದವರು, ಸಂಪುಟದಲ್ಲಿ ಸ್ಥಾನ ಬಯಸಿ ಸಚಿವರನ್ನಾಗಿ ಮಾಡಲಾಗದವರಿಗೆ ಹಿಂಬಾಗಿಲ ಮೂಲಕ ಸಚಿವಸಂಪುಟದ ಸ್ಥಾನಮಾನವನ್ನು ಈ ಸರಕಾರ ಕೊಡುತ್ತಿದೆ ಎಂದು ಟೀಕಿಸಿದರು.
ರಾಜ್ಯ ಸರಕಾರವು ದೊಡ್ಡ ಇತಿಹಾಸ ನಿರ್ಮಿಸಲು ಹೊರಟಂತಿದೆ ಎಂದು ಆಕ್ಷೇಪಿಸಿದರು. ನಿಗಮಗಳ ಅಧ್ಯಕ್ಷರನ್ನು ಕ್ಯಾಬಿನೆಟ್ ದರ್ಜೆಗೆ ಏರಿಸಿದ ಸರಕಾರವು ನಿಗಮಕ್ಕೆ ಎಷ್ಟು ಹಣ ಕೊಟ್ಟಿದೆ ಎಂದು ಅವರು ಕೇಳಿದರು. ದೇವರಾಜ ಅರಸು ಅಭಿವೃದ್ಧಿ ನಿಗಮಕ್ಕೆ 2023-24ರಲ್ಲಿ 100 ಕೋಟಿ ರೂ. ಘೋಷಿಸಿ ಕೇವಲ 50 ಕೋಟಿ ಕೊಟ್ಟಿದ್ದಾರೆ ಎಂದು ಟೀಕಿಸಿದರು.
ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ನಾವು 25 ಕೋಟಿ ಕೊಟ್ಟಿದ್ದೆವು. ಇವರು ಘೋಷಿಸಿದ್ದು 13 ಕೋಟಿ. ಕೊಟ್ಟಿರುವುದು 6.5 ಕೋಟಿ ಎಂದರು. ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ನಾವು 25 ಕೋಟಿ ಬಿಡುಗಡೆ ಮಾಡಿದ್ದೆವು. ಇವರು ಬಿಡುಗಡೆ ಮಾಡಿದ್ದು 4.5 ಕೋಟಿ ಎಂದು ವಿವರಿಸಿದರು.
ಉಪ್ಪಾರ ಅಭಿವೃದ್ಧಿ ನಿಗಮಕ್ಕೆ 4 ಕೋಟಿ. ಸವಿತಾ ಸಮಾಜಕ್ಕೆ 2.5 ಕೋಟಿ. ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ 6 ಕೋಟಿ, ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮಕ್ಕೆ 4.5 ಕೋಟಿ ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಕೇವಲ 7.5 ಕೋಟಿ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಇವರಿಗೆ ಹಿಂದುಳಿದ ವರ್ಗಗಳ ಮತ ಬೇಕು. ಆದರೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ಬೇಕಾಗಿಲ್ಲ ಎಂದು ಟೀಕಿಸಿದರು.