ಬೆಂಗಳೂರು: ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ ಎಸ್ ಎಸ್ ಕುರಿತು ದ್ವೇಷ, ಹೊಟ್ಟೆ ಉರಿಯಿಂದ ಮಾತನಾಡುತ್ತಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಟೀಕಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರು ಆರೆಸ್ಸೆಸ್ ಅನ್ನು ದೆವ್ವ ಎಂದು ಕರೆದಿದ್ದಾರೆ. ಬಿಜೆಪಿಯ ಹಿಂದೆ ಇರುವ ಆರೆಸ್ಸೆಸ್ ಅನ್ನು ನೆರಳಿಗೆ ಹೋಲಿಸಿದ್ದಾರೆ ಎಂದರು.
ಆರೆಸ್ಸೆಸ್ ಸ್ಥಾಪನೆಯಾಗಿ ನೂರು ವರ್ಷವಾಗಿದೆ. ಇಂದು ವಿಶ್ವದಲ್ಲಿ ನಂಬರ್ ಒನ್ ದೇಶಭಕ್ತ ಸಂಘಟನೆಯಾಗಿದೆ. ಆರೆಸ್ಸೆಸ್‍ನಿಂದ ಹೊರಬಂದವರು ದೇಶಸೇವೆ; ಸಮಾಜಸೇವೆ ಮಾಡುತ್ತಾರೆ. ಅದನ್ನು ನೋಡಿ ಇವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಈ ದೇಶದ ಅಭಿವೃದ್ಧಿಗೆ ಆರೆಸ್ಸೆಸ್ ಬಹಳ ದೊಡ್ಡ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದರು.
ಕಾಶ್ಮೀರ ಈ ದೇಶದಲ್ಲಿ ಉಳಿಯಲು, ಸಂಸ್ಕೃತಿ ಉಳಿವಿಗೆ, ದೇಶದ ಶಿಕ್ಷಣದ ಪರಿಸ್ಥಿತಿ ಸುಧಾರಣೆಗೆ ಶ್ರೀರಾಮ ದೇಗುಲ ನಿರ್ಮಾಣ, ದೇಶದ ಏಕತೆ, ಅಖಂಡತೆ ಕಾಪಾಡುವ ವಿಚಾರ- ಹೀಗೆ ಅನೇಕ ವಿಷಯಗಳಲ್ಲಿ ಆರೆಸ್ಸೆಸ್ಸಿನ ಕೊಡುಗೆಯನ್ನು ನೀವು ಮನಗಾಣಲು ಸಾಧ್ಯವಿಲ್ಲ ಎಂದು ನುಡಿದರು.
ಪ್ರಿಯಾಂಕ್ ಖರ್ಗೆ ಮತ್ತು ಅವರ ತಂದೆ ಆರು ತಿಂಗಳು ಆರೆಸ್ಸೆಸ್ ಕುರಿತು ಅಧ್ಯಯನ ಮಾಡಲು ಬರಬೇಕು. ಆಗಲಾದರೂ ಆರೆಸ್ಸೆಸ್ ಬಗ್ಗೆ ಗೊತ್ತಾಗಬಹುದು ಎಂದು ವ್ಯಂಗ್ಯವಾಡಿದರು.