ಬೆಂಗಳೂರು: ದಲಿತರ ಕುರಿತು ತಮಗೆ ಬದ್ಧತೆ, ಸಾಮಾಜಿಕ ಕಳಕಳಿ ಇದ್ದರೆ ಮುಖ್ಯಮಂತ್ರಿ, ದಲಿತ ಸಚಿವರು ಮತ್ತು ಶಾಸಕರು ಕೂಡಲೇ ರಾಜೀನಾಮೆ ಕೊಡಬೇಕು. ನಿಮಗೆ ಮಾನವೀಯತೆ ಇದ್ದರೆ, ಮೀಸಲು ಕ್ಷೇತ್ರದಿಂದ ಗೆದ್ದಿದ್ದರೆ 54 ಶಾಸಕರು ಮುಂದಿನ ವಿಧಾನಸಭಾ ಕಲಾಪಗಳಲ್ಲಿ ಭಾಗವಹಿಸಬಾರದು; ರಾಜೀನಾಮೆ ಕೊಡಿ ಎಂದು ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.
ಅವರು ಇಂದು ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.
ಪರಿಶಿಷ್ಟ ಜಾತಿ, ಪಂಗಡದ 54 ಜನ ಶಾಸಕರು ಇದ್ದಾರೆ. ಶಿಕ್ಷಣದಲ್ಲಿ ಕ್ರಾಂತಿ ಆಗಿದೆ. ಆದರೆ, ಈ 54 ಶಾಸಕರು ಮಾತನಾಡುತ್ತಿಲ್ಲ. ಈ ವರ್ಗಗಳ ಮಂತ್ರಿಗಳು ಸಚಿವ ಸಂಪುಟ ಸಭೆಯಲ್ಲಿ ಮಾತನಾಡುವುದಿಲ್ಲ. ಯಾಕೆ ನೀವು ಸಚಿವ ಸ್ಥಾನದಲ್ಲಿ ಇದ್ದೀರಿ ಎಂದು ಪ್ರಶ್ನಿಸಿದರು.
35 ವರ್ಷ ಹೋರಾಟ ಮಾಡಿದ ಮಾದಿಗರಿಗೆ ಸಿದ್ದರಾಮಯ್ಯನವರು ತಿರುಪತಿ ನಾಮ ಇಟ್ಟಿದ್ದಾರೆ. ಒಳ ಮೀಸಲಾತಿ ವಿಚಾರದಲ್ಲಿ 101 ಜಾತಿಗೂ ಸಿದ್ದರಾಮಯ್ಯನವರು ಚೆಂಬು ಕೊಟ್ಟಿದ್ದಾರೆ. ಉದ್ಯೋಗಾಕಾಂಕ್ಷಿ ಯುವಜನರ ಕಿವಿಗೆ ಚೆಂಡು ಹೂವನ್ನು ಇಟ್ಟಿದ್ದಾರೆ ಎಂದು ಆರೋಪಿಸಿದರು.
ತಮಿಳುನಾಡು ರಾಜ್ಯವು ಆರ್ಟಿಕಲ್ 9ರಡಿ ಸೇರಿ ಶೇ 69 ಮೀಸಲಾತಿ ಕೊಡುತ್ತಿದೆ. ತೊಡೆ ತಟ್ಟಿ ಆ ರಾಜ್ಯದ ಶೋಷಿತ ವರ್ಗಕ್ಕೆ ಮೀಸಲಾತಿ ನೀಡಿದೆ. ನಿಮಗೆ ಒಳ ಮೀಸಲಾತಿ ಬಗ್ಗೆ ಹೈಕೋರ್ಟ್, ಸುಪ್ರೀಂ ಕೋರ್ಟಿನಲ್ಲಿ ಹೇಗೆ ವಾದ ಮಾಡಬೇಕೆಂದು ಗೊತ್ತಿಲ್ಲದೇ ಇಲ್ಲ. ಆದರೆ ನಿಮಗೆ ಆಸಕ್ತಿ ಇಲ್ಲ. ಸಮೀಕ್ಷೆ, ಆಯೋಗದ ವರದಿಗಳಿಗೆ ಹಣ ಖರ್ಚು ಮಾಡಿದ್ದೀರಿ. ಇದೇನು ನಿಮ್ಮಪ್ಪನ ದುಡ್ಡೇ ಎಂದು ಪ್ರಶ್ನಿಸಿದರು.
ಸುಪ್ರೀಂ ಕೋರ್ಟಿನ ತೀರ್ಪು ಬಂದು ಒಂದು ವರ್ಷ ಕಳೆದರೂ ರಾಜ್ಯ ಸರಕಾರ ಒಳಮೀಸಲಾತಿ ಕುರಿತು ಚರ್ಚಿಸಿಲ್ಲ. ನ್ಯಾ. ಸದಾಶಿವ ಅವರ, ಮಾಧುಸ್ವಾಮಿ ಮತ್ತು ನ್ಯಾ. ನಾಗಮೋಹನ್‍ದಾಸ್ ಅವರ ವರದಿಯನ್ನೂ ತಿರಸ್ಕರಿಸಿ ಒಳಮೀಸಲಾತಿಯಲ್ಲಿ ಗೊಂದಲ ಸೃಷ್ಟಿಸಿದ್ದರು. ಹೈಕೋರ್ಟಿನಲ್ಲಿ ಕೇಸ್ ದಾಖಲಾಗಿತ್ತು. ಬಳಿಕ ಸದನದಲ್ಲಿ ಮಸೂದೆಗೆ ಒಪ್ಪಿಗೆ ಕೊಟ್ಟಿದ್ದು, ರಾಜ್ಯಪಾಲರಿಗೆ ಕಳಿಸಿದ್ದರು ಎಂದರು.
ದಲಿತರನ್ನು ದಿಕ್ಕು ತಪ್ಪಿಸಲು ರಾಜ್ಯ ಸರಕಾರವು ನಿನ್ನೆಯ ಕ್ಯಾಬಿನೆಟ್ ಸಭೆಯಲ್ಲಿ ಮತ್ತೆ ಹಳೆ ಮೀಸಲಾತಿಗೆ ಹೋಗುವುದಾಗಿ ತಿಳಿಸಿದೆ. ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯದ ಹರಿಕಾರರು. ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ಕೊಡುವುದಾದರೆ ಮಿತಿಯನ್ನು ಶೇ. 50 ಅನ್ನು ಮೀರಬಹುದಾಗಿದೆ. ಇಂದಿರಾ ಸಹಾನಿ ಪ್ರಕರಣದಲ್ಲಿ ಇದನ್ನು ತಿಳಿಸಿದ್ದಾರೆ ಎಂದು ಹೇಳಿದರು.
ಛತ್ತೀಸಗಡದಲ್ಲಿ ಶೇ 58 ಮೀಸಲಾತಿ ಮಾಡಿದಾಗ ಅಲ್ಲಿನ ಹೈಕೋರ್ಟ್ ಅದಕ್ಕೆ ತಡೆಯಾಜ್ಞೆ ಕೊಟ್ಟಿತ್ತು. ಅದೇ ಸರಕಾರ ಮತ್ತೆ ಸುಪ್ರೀಂ ಕೋರ್ಟಿಗೆ ಹೋದಾಗ ಅಲ್ಲಿ ಆದೇಶ ನೀಡಿ ಶೇ 58 ಅನ್ನು ಮುಂದುವರೆಸಬಹುದು ಎಂದು ತಿಳಿಸಿದೆ. ಮಧ್ಯಪ್ರದೇಶದಲ್ಲಿ ಶೇ 57 ಉದ್ಯೋಗಾವಕಾಶ ನೀಡಿದೆ. ಕರ್ನಾಟಕ ರಾಜ್ಯ ಸರಕಾರವು ಈ ಸಂಬಂಧ ವಾದ ಮಂಡಿಸಿಲ್ಲ ಎಂದು ಟೀಕಿಸಿದರು.