2026-06-08 01:19:56

bjp government is responsible for transport employees problems;ramalingareddy to r ashok| ಸಾರಿಗೆ ನೌಕರರ ಸಮಸ್ಯೆಗಳಿಗೆ ಬಿಜೆಪಿ ಸರ್ಕಾರವೇ ಕಾರಣ; ಅಶೋಕ್‌ ಗೆ ರಾಮಲಿಂಗಾರೆಡ್ಡಿ ತಿರುಗೇಟು |Speed News Kannada

bjp government is responsible for transport employees problems;ramalingareddy to r ashok| ಸಾರಿಗೆ ನೌಕರರ ಸಮಸ್ಯೆಗಳಿಗೆ ಬಿಜೆಪಿ ಸರ್ಕಾರವೇ ಕಾರಣ; ಅಶೋಕ್‌ ಗೆ ರಾಮಲಿಂಗಾರೆಡ್ಡಿ ತಿರುಗೇಟು |Speed News Kannada

ಬೆಂಗಳೂರು: ಸಾರಿಗೆ ನೌಕರರ ಬಗ್ಗೆ  ಅನುಕಂಪದ ಮಾತನಾಡಲು ನಿಮಗೆ ಯಾವ ನೈತಿಕತೆ ಇದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಪ್ರತಿಪಕ್ಷದ ನಾಯಕ ಆರ್.‌ ಅಶೋಕ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಅಶೋಕ್‌ ಅವರಿಗೆ ತಿರುಗೇಟು ನೀಡಿರುವ ರಾಮಲಿಂಗಾರೆಡ್ಡಿ ಅವರು ಅಂಕಿಅಂಶ ಸಹಿತ ಇಂದಿನ ಗೊಂದಲಗಳಿಗೆ ಹಿಂದಿನ ಬಿಜೆಪಿ ಸರ್ಕಾರ ಕಾರಣ ಎನ್ನುವುದನ್ನು ವಿವರಿಸಿದ್ದಾರೆ.

ನಾಲ್ಕು ಸಾರಿಗೆ ಸಂಸ್ಥೆಗಳ ಬಾಕಿ ಹೊಣೆಗಾರಿಕೆ 31.03.2026 ರಂತೆ ರೂ. 7130.80 ರಷ್ಟಿದೆ. ಬಿ.ಜಿ.ಪಿ ಆಡಳಿತ ಅವಧಿಯ ನೌಕರರ ಭವಿಷ್ಯ ನಿಧಿ ಮತ್ತು ಡೀಸೆಲ್‌ ಬಾಕಿ ಹಣ ಪಾವತಿಗಾಗಿ, 2025ರಲ್ಲಿ ನಮ್ಮ ಸರ್ಕಾರ ಬ್ಯಾಂಕ್‌ನಿಂದ ರೂ.2000 ಕೋಟಿ ಸಾಲವನ್ನು ಪಡೆಯಲು ಸಾರಿಗೆ ಸಂಸ್ಥೆಗಳಿಗೆ ಅನುಮತಿಸಿದ್ದು, ಈ ಸಾಲದ ಅಸಲು ಮತ್ತು ಬಡ್ಡಿಯನ್ನು ನಮ್ಮ ಸರ್ಕಾರವು ಪಾವತಿಸುತ್ತಿದೆ.

ಬಿ.ಜೆ.ಪಿ ಸರ್ಕಾರವಿದ್ದಾಗ ಮಾರ್ಚಿ-2023 ರಲ್ಲಿ ಸಾರಿಗೆ ಸಂಸ್ಥೆಗಳ ನೌಕರರ ವೇತನ ಪರಿಷ್ಕರಣೆ ಮಾಡಿ, 38 ತಿಂಗಳ ಹಿಂಬಾಕಿ ವೇತನ ಪಾವತಿ ಬಾಕಿಯಿಟ್ಟು, ಈ ಸಂಬಂಧ ಬಜೆಟ್‌ನಲ್ಲಿ ಯಾವುದೇ ಅನುದಾನವನ್ನು ಮೀಸಲಿಡದೆ ತಪ್ಪಾದ ಸರ್ಕಾರಿ ಆದೇಶ ಹೊರಡಿಸಿದ್ದೇ ಈ ಎಲ್ಲಾ ತೊಡಕುಗಳಿಗೆ ಮೂಲ ಕಾರಣವಾಗಿದೆ. ತಮ್ಮ ಬಿ.ಜೆ.ಪಿ ಆಡಳಿತ ಅವಧಿಯಲ್ಲಿ ನೀಡಬೇಕಾಗಿದ್ದ ನಿವೃತ್ತ ನೌಕರರ ವೇತನ ಪರಿಷ್ಕರಣೆ ಉಪಧನ ಬಾಕಿ ಮೊತ್ತ ರೂ.224 ಕೋಟಿ ಗಳಿಗೂ ಸಹ ಯಾವುದೇ ಅನುದಾನವನ್ನು ಮೀಸಲಿಡದೆ ಇದ್ದಾಗ್ಯೂ ಸಹ ನಮ್ಮ ಸರ್ಕಾರ 2025 ರಲ್ಲಿ ಹಣ ಬಿಡುಗಡೆಗೊಳಿಸಿದೆ.

ತಮ್ಮ ಪಕ್ಷ ದ ಅವಧಿಯಲ್ಲಿ ಮುಷ್ಕರದ ಹೆಸರಿನಲ್ಲಿ ಸರಿಸುಮಾರು 3500 ನೌಕರರನ್ನು‌ ಕೆಲಸದಿಂದ ವಜಾ, ಅಮಾನತು ಮಾಡಿ FIR ಹಾಕಿಸಿ,‌ ಇಂದಿಗೂ ಅವರು ಕೋರ್ಟ್ ಕಛೇರಿ ಅಲೆಯುತ್ತಿದ್ದಾರೆ.

ಅಶೋಕ್‌  ರವರೇ, ತಾವು ಟ್ಟೀಟ್ ಮಾಡಿದರೆ ಮಾತ್ರ ವಿರೋಧ ಪಕ್ಷದ ನಾಯಕರು ಎಂದು ಗುರುತಿಸುತ್ತಾರೆ ಎಂ‌ಬ ಕಲ್ಪನಾ ಲೋಕದಿಂದ ಹೊರ ಬನ್ನಿ. ಕಾರ್ಮಿಕ ಸಂಘಟನೆಗಳ ಬೇಡಿಕೆಗೆ ಸ್ಪಂದಿಸುವ ನಿಟ್ಟಿನಲ್ಲಿ ನಾವು ಅವರೊಡನೆ 11 ಬಾರಿ  ಸಭೆಗಳನ್ನು ನಡೆಸಿದ್ದೇವೆ. ಸಾರಿಗೆ ನೌಕರರಿಗೆ 12.5 % ವೇತನ‌ ಪರಿಷ್ಕರಣೆ ಮಾಡಿ ಸರ್ಕಾರವು ಆದೇಶ ಹೊರಡಿಸಿದೆ.  ನಾಲ್ಕು ಸಾರಿಗೆ ನಿಗಮಗಳಿಗೆ ಪ್ರತಿ ತಿಂಗಳು ರೂ72.80 ಕೋಟಿ, ಪ್ರತಿ ವರ್ಷ ರೂ.873.64 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ. 

ಈಗಾಗಲೇ ತಮ್ಮ ಪಕ್ಷದ ಆಡಳಿತದ ಅವಧಿಯ 2023 ರ ಮಾರ್ಚ್‌ ನ ವೇತನ ಪರಿಷ್ಕರಣೆಯ 26 ತಿಂಗಳ ಹಿಂಬಾಕಿ ಮೊತ್ತ ರೂ. 1271.92 ಕೋಟಿಗಳಲ್ಲಿ ಮೊದಲ ಕಂತಿನ ಹಣ ರೂ. 450 ಕೋಟಿಯನ್ನು ಸರ್ಕಾರವು ಬಿಡುಗಡೆ ಮಾಡಿದ್ದು, ನೌಕರರ ಖಾತೆಗಳಿಗೆ ಜಮಾ ಮಾಡಲಾಗಿದೆ.

ತಾವು ಸಾರಿಗೆ ಮಂತ್ರಿಯಾಗಿದ್ದಾಗಲೇ ಮೊದಲ ಬಾರಿಗೆ ವೇತನ ಪರಿಷ್ಕರಣೆಗಾಗಿ ಮುಷ್ಕರ ಹೂಡುವ ಪದ್ಧತಿ ಪ್ರಾರಂಭವಾಗಿದ್ದು, ನೌಕರರ ಸಂಘಟನೆಗಳು 35% ವೇತನ‌ ಪರಿಷ್ಕರಣೆಗೆ ಬೇಡಿಕೆ ಇಟ್ಟಿದ್ದವು, ತಾವು 10% ವೇತನ ಪರಿಷ್ಕರಣೆ ಮಾಡಿದ್ದೀರಿ ಎಂಬುದು ತಿಳಿದಿದಿಯೇ?

ತಮ್ಮದೇ ಬಿ.ಜೆ.ಪಿ ಪಕ್ಷದ ಆಡಳಿತ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳ‌ ಇತಿಹಾಸದಲ್ಲಿಯೇ ಮೊದಲ ಬಾರಿಗೆ 15 ದಿವಸಗಳ ಕಾಲ‌ ಮುಷ್ಕರ ನಡೆದಿದೆ ಎಂದು ತಿರುಗೇಟು ನೀಡಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.