2026-06-25 02:31:55

BITCOIN CASE | ಶ್ರೀಕಿ ಬಂಧನದ ಬೆನ್ನಲ್ಲೇ ನಲಪಾಡ್‌ಗೆ ಇಡಿ ಸಂಕಷ್ಟ | Speed News Kannada

BITCOIN CASE | ಶ್ರೀಕಿ ಬಂಧನದ ಬೆನ್ನಲ್ಲೇ ನಲಪಾಡ್‌ಗೆ ಇಡಿ ಸಂಕಷ್ಟ | Speed News Kannada

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದ್ದ ಬಿಟ್‌ ಕಾಯಿನ್ ಹಗರಣದ ತನಿಖೆ ಈಗ ಮಹತ್ವದ ಘಟ್ಟಕ್ಕೆ ಬಂದು ತಲುಪಿದೆ. ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಈ ಹಗರಣದ ಪ್ರಮುಖ ಸೂತ್ರಧಾರಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಸೇರಿದಂತೆ ಮೂವರನ್ನು ಬಂಧಿಸಿದ್ದು, ಈ ಬೆಳವಣಿಗೆಯು ಶಾಂತಿನಗರ ಶಾಸಕ ಎನ್‌.ಎ. ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಅವರಿಗೆ ಹೊಸ ಆತಂಕ ತಂದೊಡ್ಡಿದೆ.
ಶ್ರೀಕಿ ನೀಡುವ ಹೇಳಿಕೆ ನಲಪಾಡ್‌ ಗೆ ಕಂಟಕವಾಗಲಿದೆಯೇ?
ಬಂಧಿತ ಹ್ಯಾಕರ್ ಶ್ರೀಕಿ ಮತ್ತು ಮೊಹಮ್ಮದ್ ನಲಪಾಡ್ ನಡುವೆ ನಿಕಟ ಸಂಪರ್ಕವಿತ್ತು ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಈ ಹಿಂದೆ ರಾಜ್ಯ ಸರ್ಕಾರದ ಇ-ಪ್ರೊಕ್ಯೂ ರಮೆಂಟ್ ವೆಬ್‌ಸೈಟ್ ಹ್ಯಾಕ್ ಮಾಡಿ ಸರ್ಕಾರದ ಕೋಟ್ಯಂತರ ರೂಪಾಯಿ ಹಣವನ್ನು ಅಕ್ರಮವಾಗಿ ವರ್ಗಾಯಿಸಿದ ಪ್ರಕರಣದಲ್ಲಿ ಶ್ರೀಕಿ ತಂಡದ ಕೈವಾಡವಿತ್ತು. ಈ ಬಗ್ಗೆ ತನಿಖೆ ನಡೆಸುತ್ತಿರುವ ಎಸ್‌ಐಟಿ (SIT), ಡಿಜಿಟಲ್ ವ್ಯಾಲೆಟ್‌ಗಳ ಅಕ್ರಮದ ವೇಳೆ ನಲಪಾಡ್ ಹೆಸರನ್ನೂ ಉಲ್ಲೇಖಿಸಿತ್ತು. ಇದೇ ಕಾರಣಕ್ಕಾಗಿ ನಲಪಾಡ್ ಈಗಾಗಲೇ ಎರಡು ಬಾರಿ ಎಸ್‌ಐಟಿ ವಿಚಾರಣೆಯನ್ನು ಎದುರಿಸಿದ್ದಾರೆ. ಈಗ ಇಡಿ ಅಧಿಕಾರಿಗಳು ಶ್ರೀಕಿಯನ್ನು ವಶಕ್ಕೆ ಪಡೆದಿರುವುದರಿಂದ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಲಪಾಡ್ ಅವರ ಪಾತ್ರವೇನು ಎಂಬ ಬಗ್ಗೆ ಮತ್ತಷ್ಟು ದಾಖಲೆಗಳನ್ನು ಕಲೆಹಾಕುತ್ತಿದ್ದಾರೆ.
ಹಳೆಯ ನಂಟು ಮತ್ತು ಹತ್ತು ಲಕ್ಷದ ವರ್ಗಾವಣೆ ಈ ಹಗರಣದ ತನಿಖೆಯ ಭಾಗವಾಗಿ ಕಳೆದ ಏಪ್ರಿಲ್‌ನಲ್ಲಿ ಇಡಿ ಅಧಿಕಾರಿಗಳು ಶಾಸಕ ಹ್ಯಾರಿಸ್ ಮತ್ತು ನಲಪಾಡ್ ನಿವಾಸಗಳ ಮೇಲೆ ಸುಮಾರು 15 ಗಂಟೆಗಳ ಕಾಲ ಸುದೀರ್ಘ ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ ಶ್ರೀಕಿ ಹ್ಯಾಕ್ ಮಾಡಿದ ಬಿಟ್ಕಾಯಿನ್‌ಗಳನ್ನು ಕ್ರಿಪ್ಲೋ ಕರೆನ್ಸಿ ಮೂಲಕ ಲೇಯರಿಂಗ್ ಪದ್ಧತಿಯಲ್ಲಿ ಹಣವಾಗಿ ಪರಿವರ್ತಿಸಿರುವುದು ಪತ್ತೆಯಾಗಿತ್ತು.
ಶ್ರೀಕಿ ಅವರು ನಲಪಾಡ್ ಸಹೋದರ ಉಮರ್ ನಲಪಾಡ್‌ನ ಸಹಪಾಠಿಯಾಗಿದ್ದರಿಂದ ಇವರ ಸ್ನೇಹ ಬೆಳೆದಿತ್ತು ಎನ್ನಲಾಗಿದೆ. ಮುಂಬೈ ಮೂಲದ ವ್ಯಕ್ತಿಯೊಬ್ಬನ ಮೂಲಕ ಶ್ರೀಕಿ ಸುಮಾರು 10 ಲಕ್ಷ ರೂಪಾಯಿಗಳನ್ನು ನಲಪಾಡ್ ಖಾತೆಗೆ ವರ್ಗಾಯಿಸಿದ್ದ ಎಂಬ ಆರೋಪವೂ ಇದೆ. ಒಟ್ಟಾರೆಯಾಗಿ 4.5 ಕೋಟಿ ರೂಪಾಯಿಗಳ ಅಕ್ರಮ ವಹಿವಾಟಿನ ಶಂಕೆ ವ್ಯಕ್ತವಾಗಿದ್ದು, ಇದು ನಲಪಾಡ್ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.  ರಾಜಕೀಯ ವಲಯದಲ್ಲಿ ಹೆಚ್ಚಿದ ನಡುಕ ಶ್ರೀಕಿಯ ಬಂಧನದಿಂದ ಕೇವಲ ನಲಪಾಡ್ ಮಾತ್ರವಲ್ಲದೆ, ಹಗರಣದಲ್ಲಿ ಭಾಗಿಯಾಗಿರುವ ಇತರ ಪ್ರಭಾವಿಗಳಿಗೂ ನಡುಕ ಶುರುವಾಗಿದೆ. ಸರ್ಕಾರಿ ಹಣ ಮತ್ತು ಡಿಜಿಟಲ್ ಆಸ್ತಿಗಳ ಲೂಟಿಯಲ್ಲಿ ಯಾರಿಗೆಲ್ಲಾ ಎಷ್ಟೆಷ್ಟು ಪಾಲು ಹೋಗಿದೆ ಎಂಬುದು ಶ್ರೀಕಿ ನೀಡುವ ಹೇಳಿಕೆಯಿಂದ ಹೊರಬರಬೇಕಿದೆ.
ಒಂದು ವೇಳೆ ಶ್ರೀಕಿ ಅಕ್ರಮ ಹಣ ವರ್ಗಾವಣೆಯಲ್ಲಿ ನಲಪಾಡ್ ಪಾತ್ರದ ಬಗ್ಗೆ ಸಾಕ್ಷಿ ನೀಡಿದರೆ, ಇಡಿ ಅಧಿಕಾರಿಗಳು ನಲಪಾಡ್ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಸದ್ಯದ ಈ ಬೆಳವಣಿಗೆಗಳು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿವೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.