ಬೆಂಗಳೂರು: ಅಧಿಕಾರ ಹಸ್ತಾಂತರ ಕುರಿತು ಹಾವುಏಣಿ ಆಟ ಮುಂದುವರೆದಿರುವ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಪ್ತರು ಹುಟ್ಟುಹಬ್ಬದ ನೆಪದಲಿ ಸಭೆ ನಡೆಸಿದ್ದಾರೆ.
ಮಾಗಡಿ ಶಾಸಕ ಶಾಸಕ ಎಚ್ ಸಿ ಬಾಲಕೃಷ್ಣ ಹುಟ್ಟುಹಬ್ಬದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇವರೆಲ್ಲಾ ಒಟ್ಟು ಸೇರಿದ್ದಾರೆ. ಇವರ ಹುಟ್ಟು ಹಬ್ಬಕ್ಕೆ ಆಗಮಿಸಿದವರೆಲ್ಲರೂ ಡಿಸಿಎಂ ಶಿವಕುಮಾರ್ ಅವರ ಬೆಂಬಲಿಗರು ಎನ್ನುವುದು ಮತ್ತೊಂದು ವಿಶೇಷ. ಸುಮಾರು 18 ಶಾಸಕರು ಒಟ್ಟಿಗೆ ಸೇರಿದ್ದಾರೆ.
ಸಚಿವ ಡಿ ಸುಧಾಕರ್, ಮಂಕಾಳ ವೈದ್ಯ, ಶಾಸಕರಾದ ಸಿಪಿ ಯೋಗೇಶ್ವರ್, ಶರತ್ ಬಚ್ಚೇಗೌಡ , ಗಣಿಗ ರವಿ, ಆನೇಕಲ್ ಶಿವಣ್ಣ, ನಯನಾ ಮೋಟಮ್ಮ, ಪ್ರಕಾಶ್ ಕೋಳಿವಾಡ, ಗಣೇಶ್ ಹುಕ್ಕೇರಿ , ಮಂಥರ್ ಗೌಡ, ಎಚ್ ಡಿ ರಂಗನಾಥ್ , ಕದಲೂರು ಉದಯ ಗೌಡ , ಬಸವರಾಜ ಶಿವಗಂಗಾ , ಹರೀಶ್ ಗೌಡ, ಹಾಗೂ ಮೇಲ್ಮನೆ ಸದಸ್ಯ ರವಿ ಇದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗ ಶಾಸಕರು ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಈ ಮಧ್ಯೆ ಬಜೆಟ್ ಮಂಡನೆಗೆ ಸಿದ್ದರಾಮಯ್ಯ ಅವರು ಅಂತಿಮ ಹಂತದ ಸಿದ್ದತೆ ನಡೆಸುತ್ತಿದ್ದಾರೆ.
ಉಭಯ ಬಣಗಳ ಮುಖಂಡರು ದೆಹಲಿಗೆ ದಂಡಯಾತ್ರೆ ಕೈಗೊಳ್ಳುತ್ತಲೇ ಇದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮಾಜಿ ಸಚಿವ ಕೆ ಎನ್ ರಾಜಣ್ಣ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಡಿಸಿಎಂ ಶಿವಕುಮಾರ್ ಅವರೂ ಸಹ ಅನೇಕ ಬಾರಿ ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಮಾತುಕತೆ ನಡೆಸಿ ಬಂದಿದ್ದಾರೆ.