ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಹಕ್ಕಿ ಜ್ವರ (H5N1) ಕಾಣಿಸಿಕೊಂಡಿದ್ದು, ಸಾವಿರಕ್ಕೂ ಹೆಚ್ಚು ಕಾಗೆಗಳು ಮೃತಪಟ್ಟಿವೆ. ಇದರಿಂದ ಕರ್ನಾಟಕದಲ್ಲೂ ಆತಂಕ ಶುರುವಾಗಿದೆ.
ಭೋಪಾಲ್‌ನ ಐಸಿಎಆರ್-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸಸ್ (NIHSAD) ಪ್ರಯೋಗಾಲಯದಲ್ಲಿ ಮಾದರಿ ಪರೀಕ್ಷೆ ನಡೆದಿದೆ. ಈ ವರದಿ ಪ್ರಕಾರ ತಮಿಳುನಾಡಿನ ಕಾಗೆಗಳಲ್ಲಿ ರೋಗಕಾರಕ ಹಕ್ಕಿ ಜ್ವರ ಅಥವಾ ಏವಿಯನ್ ಇನ್‌ಫ್ಲುಯೆಂಜಾ (H5N1) ಇರುವುದು ದೃಢಪಟ್ಟಿದೆ.
ಕಳೆದ ತಿಂಗಳು ತಮಿಳುನಾಡು ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ಪ್ರಾಣಿ ರೋಗ ಗುಪ್ತಚರ ಘಟಕವು ಸಲ್ಲಿಸಿದ ವರದಿಯಲ್ಲಿ ಕಾಗೆಯ ಮಾದರಿಗಳಲ್ಲಿ (ಕಾಗೆಯ ರಕ್ತ /ಅವಶೇಷಗಳ ಮಾದರಿಗಳು) H5N1 ವೈರಸ್ ಪತ್ತೆಯಾಗಿರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಸತ್ತ ಪಕ್ಷಿಗಳನ್ನು ಭೂಮಿಯ ಆಳದಲ್ಲಿ ಹೂಳಲು ಸೂಚನೆ ನೀಡಲಾಗಿತ್ತು.
ಬೆಸೆಂಟ್ ಸ್ಮಾರಕ ಪ್ರಾಣಿ ಚಿಕಿತ್ಸಾಲಯದ (BMAD) ಶ್ರವಣ್ ಕೃಷ್ಣನ್ ಅವರು ಕಳೆದ ಕೆಲವು ವಾರಗಳಲ್ಲಿ ನಗರದಲ್ಲಿ 1,000-1,500 ಕಾಗೆಗಳು ಸಾವನ್ನಪ್ಪಿರಬಹುದು ಎಂದು ಹೇಳಿದ್ದಾರೆ. ಪ್ರತಿದಿನ ನಮಗೆ ಅಸಹಜವಾಗಿ ಕಾಗೆಗಳು ಸಾವನ್ನಪ್ಪುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ಜನರು ಅನಾರೋಗ್ಯ ಪೀಡಿತ ಕಾಗೆಗಳನ್ನು ನಮ್ಮ ಸಂಸ್ಥೆಗೆ ನಿಯಮಿತವಾಗಿ ತರುತ್ತಿದ್ದಾರೆ. ಇಂದು ಮೂರು ಕಾಗೆಗಳನ್ನು ತಂದಿದ್ದಾರೆ ಎಂದು ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮಗಳು:
ಮೃತಪಟ್ಟ ಪಕ್ಷಿಗಳ ಮೃತದೇಹಗಳನ್ನು ವೈಜ್ಞಾನಿಕವಾಗಿ ಆಳವಾಗಿ ಭೂಮಿಯಲ್ಲಿ ಹೂಳಬೇಕು. ಪಕ್ಷಿಗಳ ಆವಾಸಸ್ಥಾನಗಳ ಸಮೀಪ ವಾಸಿಸುವ, ಕೋಳಿ ಫಾರಂ ಅಥವಾ ಪ್ರಾಣಿಗಳೊಂದಿಗೆ ಕೆಲಸ ಮಾಡುವ ಜನರಿಗೆ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸಬೇಕು.