ಬೆಂಗಳೂರು: ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಏಳು ಮಂದಿ ಮೃತಪಟ್ಟ ಬೆನ್ನಲ್ಲೇ ಬೆಂಗಳೂರು ನಗರದಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಮಾಲೀಕರುಗಳಿಗೆ ಜಿಬಿಎ ನೋಟೀಸ್ ಜಾರಿಗೊಳಿಸಲು ನಿರ್ಧಾರ ಮಾಡಿದೆ. ರಾಜಧಾನಿ ನಗರದಲ್ಲಿ ಸುರಿಯುತ್ತಿರುವ ಮಳೆ ಹಾಗೂ ಮುಂಬರುವ ಮಳೆಗಾಲದಿಂದ ಹಳೆಯ ಹಾಗೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳು ಕುಸಿಯುವ ಸಂಭವಗಳಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ನೋಟಿಸ್ ನೀಡಲು ತೀರ್ಮಾನನಿಸಿದೆ.
ಕಳೆದ ವರ್ಷದ ಮಳೆಗಾಲದಲ್ಲಿ ಐದು ಹಳೆಯ ಕಟ್ಟಡಗಳು ಕುಸಿದು ಬಿದ್ದಿದ್ದವು. ಇಂತಹ ಅನಾಹುತಗಳು ಈ ಬಾರಿ ಮರುಕಳಿಸಬಾರದು ಎಂಬ ಉದ್ದೇಶದಿಂದ ನಗರಪಾಲಿಕೆಗಳು ಶಿಥಿಲ ಕಟ್ಟಡಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡುತ್ತಿದೆ.
ನಗರದಲ್ಲಿ ವಾಸಿಸುವ ನಾಗರಿಕರು ತಮ್ಮ ಸುತ್ತಮುತ್ತ ಇರುವ ಹಳೆಯ ಕಟ್ಟಡಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗಿದೆ. ಇಂತಹ ಅಪಾಯಕಾರಿಯಾದ ಕಟ್ಟಡಗಳು ಯಾವಾಗ ಬೇಕಾದರೂ ಕುಸಿಯುವ ಸಾಧ್ಯತೆಗಳಿದ್ದು, ಸಾರ್ವಜನಿಕರು ಜಾಗರೂಕರಾಗಿರಬೇಕು. ಕಳೆದ ವಾರ ಸುರಿದ ಭಾರೀ ಮಳೆಗೆ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಏಳು ಮಂದಿ ಮೃತಪಟ್ಟ ದುರಂತದ ನಂತರ ಜಿಬಿಎ ಎಚ್ಚೆತ್ತುಕೊಂಡಿದೆ.
ಈ ಘಟನೆ ಬಳಿಕ ಜಿಬಿಎ ಮುಖ್ಯ ಆಯುಕ್ತರು ಐದು ನಗರಪಾಲಿಕೆಗಳ ಆಯುಕ್ತರಿಗೆ ತುರ್ತು ಸೂಚನೆ ನೀಡಿದ್ದು, ತಮ್ಮ ತಮ್ಮ ವ್ಯಾಪ್ತಿಯಲ್ಲಿರುವ ಶಿಥಿಲಾವಸ್ಥೆಯ ಕಟ್ಟಡಗಳ ಪಟ್ಟಿಯನ್ನು ಸಿದ್ಧಪಡಿಸಿ ಮಾಲೀಕರಿಗೆ ನೋಟಿಸ್ ನೀಡುವಂತೆ ಸೂಚನೆ ನೀಡಿದ್ದಾರೆ.
ಪ್ರಸ್ತುತ ನಗರದಲ್ಲಿ ಸುಮಾರು 350ಕ್ಕೂ ಹೆಚ್ಚು ಅಪಾಯಕಾರಿಯಾದ ಕಟ್ಟಡಗಳನ್ನು ಗುರುತಿಸಲಾಗಿದ್ದು, ಈಗಾಗಲೇ 15 ಕಟ್ಟಡಗಳ ಕಾಂಪೌಂಡ್ ತೆರವುಗೊಳಿಸಲಾಗಿದೆ. ಉಳಿದ ಕಟ್ಟಡಗಳ ಮಾಲೀಕರಿಗೆ ತಕ್ಷಣವೇ ಸ್ವಯಂಪ್ರೇರಿತವಾಗಿ ಕಟ್ಟಡಗಳನ್ನು ಧ್ವಂಸಗೊಳಿಸಲು ಸೂಚಿಸಲಾಗಿದೆ. ಇಲ್ಲವಾದಲ್ಲಿ ನಗರಪಾಲಿಕೆಯೇ ಕಟ್ಟಡ ತೆರವುಗೊಳಿಸಿ ಅದರ ವೆಚ್ಚವನ್ನು ಮಾಲೀಕರಿಂದ ವಸೂಲು ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ.
ಕಟ್ಟಡ ಮಾಲೀಕರು ಸಹ ಜವಾಬ್ದಾರಿಯಿಂದ ನಡೆದುಕೊಂಡು ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸುವ ಮೂಲಕ ಜೀವಹಾನಿಯನ್ನು ತಪ್ಪಿಸಲು ಸಹಕರಿಸಬೇಕೆಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಮನವಿ ಮಾಡಿದ್ದಾರೆ.
ನಗರಪಾಲಿಕೆವಾರು ಶಿಥಿಲ ಕಟ್ಟಡಗಳ ವಿವರ ಹೀಗಿದೆ:
ಪೂರ್ವ ನಗರಪಾಲಿಕೆ 51 ಕಟ್ಟಡಗಳು; ಪಶ್ಚಿಮ ನಗರಪಾಲಿಕೆ 60; ದಕ್ಷಿಣ ನಗರಪಾಲಿಕೆ 106;ಉತ್ತರ ನಗರಪಾಲಿಕೆ 84; ಕೇಂದ್ರ ನಗರಪಾಲಿಕೆ 49 ಕಟ್ಟಡಗಳು
ಈ ಕಟ್ಟಡಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳ ಜೊತೆಗೆ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಕೆಲವು ಕಟ್ಟಡಗಳೂ ಸೇರಿವೆ. ಮಳೆಗಾಲದ ಅವಧಿಯಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ತಡೆಯಲು ಜಿಬಿಎ ಈ ಕ್ರಮ ಕೈಗೊಂಡಿದೆ.