2026-06-08 03:54:05

Bengaluru LPG cylinder | ಬೆಂಗಳೂರಿನಲ್ಲಿ LPG ಸಂಕಷ್ಟ ಬುಕ್ಕಿಂಗ್ ಸಮಸ್ಯೆಯಿಂದ ತೊಂದರೆ ಹಲವು ಪ್ರದೇಶಗಳಲ್ಲಿ ದೂರು | Speed News Kannada

Bengaluru LPG cylinder | ಬೆಂಗಳೂರಿನಲ್ಲಿ LPG ಸಂಕಷ್ಟ ಬುಕ್ಕಿಂಗ್ ಸಮಸ್ಯೆಯಿಂದ ತೊಂದರೆ ಹಲವು ಪ್ರದೇಶಗಳಲ್ಲಿ ದೂರು | Speed News Kannada

ನಗರದ ಹಲವು ಪ್ರದೇಶಗಳಲ್ಲಿ ಗೃಹಬಳಕೆಯ ಅನಿಲ ಸಿಲಿಂಡರ್‌ಗಳ ಕೊರತೆ ಹೆಚ್ಚುತ್ತಿರುವುದರಿಂದ ನಿವಾಸಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ವಾಣಿಜ್ಯ ಅನಿಲ ಸಿಲಿಂಡರ್‌ಗಳ ಪೂರೈಕೆಯಲ್ಲಿ ಉಂಟಾದ ಅಡಚಣೆ ಇದರ ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಅನೇಕರು ಅನಿಲ ಏಜೆನ್ಸಿಗಳೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗದೇ ತೊಂದರೆ ಅನುಭವಿಸುತ್ತಿದ್ದಾರೆ.
ವೈಟ್‌ಫೀಲ್ಡ್‌ನ ನಿವಾಸಿ ಅನುಭಾ ಗುಪ್ತಾ ಅವರು ಅನಿಲ ಸಿಲಿಂಡರ್ ಬುಕ್ ಮಾಡಲು ಪ್ರಯತ್ನಿಸಿದಾಗ ಅಚ್ಚರಿ ಅನುಭವಿಸಿದರು. ಅವರು ಹೇಳುವಂತೆ, ಏಜೆನ್ಸಿಗೆ ಸುಮಾರು 12 ಗಂಟೆಗಳ ಕಾಲ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ದೊರಕಲಿಲ್ಲ. ನಂತರ ಅಪ್ಲಿಕೇಶನ್‌ನಲ್ಲಿ ಲಾಗಿನ್ ಮಾಡಿದಾಗ, ಕಳೆದ ಎರಡು ವಾರಗಳಲ್ಲಿ ಸಿಲಿಂಡರ್ ಪಡೆದಿದ್ದರಿಂದ ಮತ್ತೊಂದು ಬುಕ್ ಮಾಡಲು ಸಾಧ್ಯವಿಲ್ಲ ಎಂಬ ಸಂದೇಶ ಕಂಡುಬಂದಿತು. ಆದರೆ ಅವರು ಯಾವುದೇ ಸಿಲಿಂಡರ್ ಬುಕ್ ಮಾಡಿರಲಿಲ್ಲ. ಇತಿಹಾಸವನ್ನು ಪರಿಶೀಲಿಸಿದಾಗ, ತಮ್ಮ ಹೆಸರಿನಲ್ಲಿ ಇತ್ತೀಚೆಗೆ ಏಳು ಸಿಲಿಂಡರ್‌ಗಳು ಬುಕ್ ಆಗಿರುವುದನ್ನು ನೋಡಿ ಅವರು ಆಶ್ಚರ್ಯಗೊಂಡರು.
ಬೊಮ್ಮಸಂದ್ರದ ನಿವಾಸಿ ಆಕಾಶ್ ದಾಸ್ ಕೂಡ ಇದೇ ರೀತಿಯ ಸಮಸ್ಯೆಯನ್ನು ಎದುರಿಸಿದ್ದಾರೆ. ಮಾರ್ಚ್ 11ರಂದು ಅನೇಕ ಬಾರಿ ಪ್ರಯತ್ನಿಸಿದ ನಂತರ ಅವರು ಸಿಲಿಂಡರ್ ಬುಕ್ ಮಾಡಿದರು. ಆದರೆ ಮಾರ್ಚ್ 12ರಂದು ಸಿಲಿಂಡರ್ ಯಶಸ್ವಿಯಾಗಿ ವಿತರಿಸಲಾಗಿದೆ ಎಂಬ ಸಂದೇಶ ಬಂದರೂ, ಅವರ ಮನೆಗೆ ಯಾವುದೇ ಸಿಲಿಂಡ‌ರ್ ತಲುಪಿಲ್ಲ ಎಂದು ಅವರು ಹೇಳಿದರು. ಅವರು ಬೆಳಗ್ಗಿನಿಂದ ಏಜೆನ್ಸಿಯನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರತಿಕ್ರಿಯೆ ಸಿಗಲಿಲ್ಲ ಎಂದು ತಿಳಿಸಿದ್ದಾರೆ. ನಗರದ ಕನಕಪುರ ರಸ್ತೆ, ಗುಂಜೂರು, ಬನ್ನೇರುಘಟ್ಟ ರಸ್ತೆ, ಬನಶಂಕರಿ, ರಾಜಾಜಿನಗರ ಮತ್ತು ಓಕಳಿಪುರಂ ಪ್ರದೇಶಗಳಲ್ಲಿಯೂ ಇದೇ ರೀತಿಯ ಸಮಸ್ಯೆಗಳು ವರದಿಯಾಗಿವೆ. ಹಲವಾರು ನಿವಾಸಿಗಳು ತಮ್ಮ ಅನಿಲ ಏಜೆನ್ಸಿಗಳೊಂದಿಗೆ 48 ಗಂಟೆಗಳಿಗಿಂತ ಹೆಚ್ಚು ಸಮಯ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ ಎಂದು ದೂರಿದ್ದಾರೆ. ಇದರಿಂದ ಕೆಲವರು ಕಪ್ಪು ಮಾರುಕಟ್ಟೆಯಿಂದ ಸಿಲಿಂಡ‌ರ್ ಖರೀದಿಸಲು ರಾಗಿದ್ದಾರೆ ಕಪ್ಪು ಮಾರುಕಟ್ಟೆಯಲ್ಲಿ ಸಿಲಿಂಡರ್ ಬೆಲೆ 1,600 ರೂ.ರಿಂದ 3,000 ರೂ. ವರೆಗೆ ಹೋಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಕೆಲವರು ನಿವಾಸಿಗಳು ಅನಿಲ ಏಜೆನ್ಸಿಗಳು ಗೃಹಬಳಕೆಯ ಸಿಲಿಂಡರ್‌ಗಳನ್ನು ವಾಣಿಜ್ಯ ಬಳಕೆದಾರರಿಗೆ ಹೆಚ್ಚು ದರಕ್ಕೆ ಮಾರುತ್ತಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದಾರೆ. ಸಾಮಾನ್ಯವಾಗಿ ಮೂರು ದಿನಗಳೊಳಗೆ ಸಿಲಿಂಡರ್‌ ವಿತರಣೆ ಆಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಬುಕ್ ಮಾಡಿದರೂ ವಿತರಣೆ ವಿಳಂಬವಾಗುತ್ತಿದೆ ಎಂದು ಹಲವರು ಹೇಳಿದ್ದಾರೆ. ಈ ಸಮಸ್ಯೆಗೆ ತ್ವರಿತ ಪರಿಹಾರ ಕಂಡುಹಿಡಿಯಬೇಕು ಎಂದು ನಾಗರಿಕರು ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.