2026-03-10 04:22:15

benefits from pm surya ghar project; bescom Speed News Kannada

benefits from pm surya ghar project; bescom Speed News Kannada

ಬೆಂಗಳೂರು:ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪಿಎಂ ಸೂರ್ಯ ಘರ್ ಯೋಜನೆ ಅನುಷ್ಠಾನಕ್ಕೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ವಸತಿ ಸಮುಚ್ಚಯಗಳ ಸಂಘಗಳು ಬೆಸ್ಕಾಂ ಜೊತೆ ಕೈಜೋಡಿಸಿ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ ಮನವಿ ಮಾಡಿದ್ದಾರೆ.

ಪಿಎಂ ಸೂರ್ಯ ಘರ್ ಯೋಜನೆ ಅನುಷ್ಠಾನ ಕುರಿತು ಬೆಸ್ಕಾಂ ನಿಗಮ ಕಚೇರಿಯಲ್ಲಿ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅಪಾರ್ಟ್‌ ಮೆಂಟ್ ನಿವಾಸಿಗಳ ಜೊತೆ ಚರ್ಚೆ ನಡೆಸಿದ ಅವರು, ಯೋಜನೆ ಅನುಷ್ಠಾನಕ್ಕೆ ಸಹಕರಿಸಬೇಕು ಎಂದು ವಿನಂತಿಸಿದರು. ಬೆಸ್ಕಾಂ ಕ್ಷೇತಾಧಿಕಾರಿಗಳು ಮುಂದಿನ ದಿನಗಳಲ್ಲಿ ಅಪಾರ್ಟ್‌ ಮೆಂಟ್ ಸಂಘದ ಪದಾಧಿಕಾರಿಗಳ ಜೊತೆ ನಿರಂತರ ಸಂಪರ್ಕ ಸಾಧಿಸಿ ಯೋಜನೆ ಅನುಷ್ಠಾನಕ್ಕೆ ಮನವೊಲಿಸಬೇಕು ಹಾಗೂ ಯೋಜನೆಗೆ ಸಂಬಂಧಿಸಿದ ಮಾಹಿತಿ ಕುರಿತು ಅರಿವು ಮೂಡಿಸಬೇಕು ಎಂದು ಸೂಚನೆ ನೀಡಿದರು.

ನಗರದಲ್ಲಿ ಮೇಲ್ಛಾವಣಿ ಸೌರ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ಉತ್ತೇಜನ ನೀಡಬೇಕು. ಗ್ರಾಹಕರು ಮೇಲ್ಛಾವಣಿ ಸೌರ ಘಟಕಗಳನ್ನು ಅಳವಡಿಸಿಕೊಳ್ಳಲು ಅಗತ್ಯವಾದ ಸಹಾಯವನ್ನು ನೀಡಲು ಬೆಸ್ಕಾಂ ಸದಾ ಬದ್ಧವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಗೃಹ ಬಳಕೆಯ ಮೇಲ್ಛಾವಣಿ ಸೌರ ಘಟಕಗಳ ಅಳವಡಿಕೆಗೆ ಕೇಂದ್ರ ಸರ್ಕಾರದಿಂದ ದೊರೆಯುವ ಆರ್ಥಿಕ ಸಹಾಯ (CFA), ರಾಷ್ಟ್ರೀಯ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ, ವಿದ್ಯುತ್ ಬಿಲ್ಲು ಉಳಿತಾಯ , ಶುದ್ಧ ಇಂಧನ ಉತ್ಪಾದನೆ ಹಾಗೂ ಪರಿಸರ ಸಂರಕ್ಷಣೆಗೆ ನೀಡುವ ಕೊಡುಗೆ ಕುರಿತು ಮಾಹಿತಿ ನೀಡಲಾಯಿತು. ಮೇಲ್ಛಾವಣಿ ಸೌರ ಘಟಕಗಳಿಗೆ ಗ್ರಿಡ್ ಸಂಪರ್ಕ ಹಾಗೂ ನೆಟ್ ಮೀಟರಿಂಗ್ ವ್ಯವಸ್ಥೆ ಒದಗಿಸುವಲ್ಲಿ ವಿದ್ಯುತ್ ವಿತರಣೆ ಸಂಸ್ಥೆಗಳ ಪಾತ್ರವನ್ನೂ ವಿವರಿಸಲಾಯಿತು.

ಪಿಎಂ ಸೂರ್ಯ ಘರ್ ಯೋಜನೆಯಡಿ ಬೆಸ್ಕಾಂ ವ್ಯಾಪ್ತಿಯಲ್ಲಿ ಈಗಾಗಲೇ ಒಟ್ಟು 4.87 ಮೆಗಾವಾಟ್ ಸಾಮರ್ಥ್ಯದ ಮೇಲ್ಛಾವಣಿ ಸೌರ ವಿದ್ಯುತ್ ಘಟಕಗಳು ಅಳವಡಿಕೆಯಾಗಿದ್ದು, ಇದುವರೆಗೆ 137 ಅರ್ಜಿಗಳು ಬಂದಿವೆ ಎಂದು ತಿಳಿಸಲಾಯಿತು. ಇದರಿಂದ ನವೀಕರಿಸಬಹುದಾದ ಇಂಧನ ಬಳಕೆಗೆ ಗ್ರಾಹಕರಲ್ಲಿ ಆಸಕ್ತಿ ಹೆಚ್ಚುತ್ತಿರುವುದು ಸ್ಪಷ್ಟವಾಗುತ್ತಿದೆ ಎಂದು ತಿಳಿಸಲಾಯಿತು.

ಅಪಾರ್ಟ್‌ಮೆಂಟ್‌ಗಳ ಸಾಮೂಹಿಕ ಪ್ರದೇಶಗಳಾದ ಲಿಫ್ಟ್, ನೀರಿನ ಪಂಪ್ ಮತ್ತು ಬೆಳಕು ವ್ಯವಸ್ಥೆಗಳಿಗೆ ಮೇಲ್ಛಾವಣಿ ಸೌರ ವಿದ್ಯುತ್ ಬಳಕೆ ಮಾಡಿದರೆ ವಿದ್ಯುತ್ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂದು ಸಭೆಯಲ್ಲಿ ತಿಳಿಸಲಾಯಿತು.

 

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.