ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಮತ್ತು ಆಟಗಾರರು ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಅನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ ಎಂದು ಹೇಳಿಕೆ ನೀಡಿದ್ದ ಬಾಂಗ್ಲಾದೇಶ ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್ ಇದೀಗ ತಮ್ಮ ನಿಲುವು ಬದಲಾಯಿಸಿಕೊಂಡಿದ್ದಾರೆ. ಬಿಸಿಬಿ ಮತ್ತು ಆಟಗಾರರು ಭಾಗವಹಿಸದಿರಲು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಮಂಗಳವಾರ (ಫೆ.10) ನಜ್ರುಲ್ ವರದಿಗಾರರಿಗೆ ಹೇಳಿದ್ದರು. ಈ ಹೇಳಿಕೆಯು ಗೊಂದಲ ಮತ್ತು ಟೀಕೆಗೆ ಕಾರಣವಾಯಿತ್ತು. ಸರ್ಕಾರವು ಈ ಹಿಂದೆ ಭದ್ರತಾ ಕಾಳಜಿಗಳ ಆಧಾರದ ಮೇಲೆ ಬಹಿಷ್ಕಾರ ನಿರ್ಧಾರ ಮಾಡಿದೆ ಎಂದು ಹೇಳಿತ್ತು. ಬಳಿಕ ನಜ್ರುಲ್ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.
ಹೆಚ್ಚುತ್ತಿರುವ ಟೀಕೆಗಳ ನಡುವೆ ನಜ್ರುಲ್ ಬುಧವಾರ ಸ್ಪಷ್ಟಿಕರಣ ನೀಡಿದ್ದಾರೆ, ತಾನು ಈ ವಿಷಯವನ್ನು ಸ್ಪಷ್ಟವಾಗಿ ವಿವರಿಸಲು ವಿಫಲರಾಗಿದ್ದೆ ಎಂದು ಒಪ್ಪಿಕೊಂಡರು. "ವಿಶ್ವಕಪ್‌ನಲ್ಲಿ ಆಡದಿರುವ ನಿರ್ಧಾರವನ್ನು ಸರ್ಕಾರವೇ ಮಾಡಿದೆ ಎಂದು ನಾನು ದೃಢವಾಗಿ ಹೇಳುತ್ತೇನೆ" ಎಂದು ಅವರು ಹೇಳಿದರು.ಬಿಸಿಬಿ ಕಾರ್ಯಕ್ರಮದ ನಂತರ ಪತ್ರಕರ್ತರೊಂದಿಗೆ "ಸಿದ್ಧತೆ ಇಲ್ಲದ ಸಂಭಾಷಣೆ'ಯ ಸಂದರ್ಭದಲ್ಲಿ ತಮ್ಮ ಹಿಂದಿನ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ನಜ್ರುಲ್ ವಿವರಿಸಿದರು. ಆಡದಿದ್ದಕ್ಕೆ ವಿಷಾದವಿದೆಯೇ ಎಂಬ ಪ್ರಶ್ನೆ ಕೇಳಲಾಗಿದೆಯೇ ಹೊರತು ನಿರ್ಧಾರ ತೆಗೆದುಕೊಂಡವರು ಯಾರು ಎಂಬುದರ ಬಗ್ಗೆ ಅಲ್ಲ ಎಂದು ಅವರು ಹೇಳಿದ್ದಾರೆ. ನಜ್ರುಲ್ ಅವರ ಪ್ರಕಾರ, ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಸರ್ಕಾರ ಜನವರಿಯ ಆರಂಭದಲ್ಲಿ ತಂಡವನ್ನು ಭಾರತಕ್ಕೆ ಕಳುಹಿಸದಿರಲು ನಿರ್ಧರಿಸಿತ್ತು. ಹಿಂದಿನ ಹಲವಾರು ಹೇಳಿಕೆಗಳಲ್ಲಿ ಅವರು ಆ ನಿಲುವನ್ನು ಸ್ಪಷ್ಟಪಡಿಸಿದ್ದರು ಎಂದು ಅವರು ಸಮರ್ಥಿಸಿಕೊಂಡರು.