ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವದ ಅಂಗವಾಗಿ, ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತ ರಾಜೇಂದ್ರ ಚೋಳನ್ ಅವರು ಇಂದು ಬೆಳಿಗ್ಗೆ ಧರ್ಮರಾಯಸ್ವಾಮಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿ ಪೂರ್ವ ಸಿದ್ಧತೆಗಳ ಸ್ಥಳ ಪರಿಶೀಲನೆ ನಡೆಸಿದರು.
ದೇವಸ್ಥಾನ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಕರಗ ಹಾದು ಹೋಗುವ ಮಾರ್ಗದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಚನೆ ನೀಡಿದರು.
ರಸ್ತೆ ದುರಸ್ಥಿ ಮತ್ತು ಗುಂಡಿ ಮುಚ್ಚುವಿಕೆ; ಒಳಚರಂಡಿ ಮ್ಯಾನ್‌ಹೋಲ್‌ಗಳ ದುರಸ್ಥಿ; ಪ್ರದೇಶದ ಶುಚಿತ್ವ ಕಾಪಾಡುವುದು ಮತ್ತು ತ್ಯಾಜ್ಯ ಸಾಗಾಟ; ಬ್ಲ್ಯಾಕ್ ಸ್ಪಾಟ್‌ಗಳ ತೆರವು; ವಾರಸುದಾರರಿಲ್ಲದೆ ನಿಲ್ಲಿಸಲಾದ ವಾಹನಗಳ ತೆರವು; ಕಟ್ಟಡ ತ್ಯಾಜ್ಯ ತೆರವು; ಬೆಸ್ಕಾಂ ಅನುಪಯುಕ್ತ ಕಂಬಗಳ ತೆರವು; ಉತ್ಸವ ಸ್ಥಳ ಹಾಗೂ ಸುತ್ತಮುತ್ತ ವಿದ್ಯುತ್ ದೀಪಾಲಂಕಾರ ಕೈಗೊಳ್ಳುವಂತೆ ಸೂಚನೆ ನೀಡಿದರು.
ಕಳೆದ ವಾರ ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರು ನಡೆಸಿದ ಸಭೆಯ ನಿರ್ದೇಶನಗಳ ಅನುಸಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್, ಜಂಟಿ ಆಯುಕ್ತ ಹೇಮಂತ್ ಶರಣ್, ಮುಖ್ಯ ಅಭಿಯಂತರ ವಿಜಯ್ ಕುಮಾರ್ ಹರಿದಾಸ್, ಅಧೀಕ್ಷಕ ಅಭಿಯಂತರರು, ಚಿಕ್ಕಪೇಟೆ ಹಾಗೂ ಗಾಂಧಿನಗರ ಕಾರ್ಯಪಾಲಕ ಅಭಿಯಂತರರು, ಧರ್ಮರಾಯಸ್ವಾಮಿ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಉಪಸ್ಥಿತರಿದ್ದರು.