2026-03-07 07:33:53

Ballot Papers | ರಾಜ್ಯದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿಇವಿಎಂ ಬದಲಿಗೆ ಮತಪತ್ರ ಬಳಕೆ ಸಚಿವ ಸಂಪುಟ ಮಹತ್ವದ ತೀರ್ಮಾನ | Speed News Kannada

Ballot Papers | ರಾಜ್ಯದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿಇವಿಎಂ ಬದಲಿಗೆ ಮತಪತ್ರ ಬಳಕೆ ಸಚಿವ ಸಂಪುಟ ಮಹತ್ವದ ತೀರ್ಮಾನ | Speed News Kannada

ಬೆಂಗಳೂರು: ಇನ್ನು ಮುಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಮತಪತ್ರಗಳನ್ನು (ಬ್ಯಾಲೆಟ್‌ ಪೇಪರ್‌) ಬಳಸಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. 
ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬದಲು ಮತಪತ್ರಗಳ (ಬ್ಯಾಲೆಟ್‌ ಪೇಪರ್‌) ಮೂಲಕವೇ ಚುನಾವಣೆ ನಡೆಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಮತಪತ್ರ ಬಳಸಿ ಚುನಾವಣೆ ನಡೆಸಲು ಈಗಾಗಲೇ ತೀರ್ಮಾನಿಸಲಾಗಿದೆ. ಇತರೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಅದೇ ಮಾದರಿ ಅನುಸರಿಸಲು ಕಾಯ್ದೆಗೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.
ಪಾರದರ್ಶಕತೆ ಮತ್ತು ಗೌಪ್ಯತೆ ಖಚಿತಪಡಿಸಿಕೊಳ್ಳಲು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಈ ಹಿಂದಿನಂತೆ ಮತಪತ್ರ, ಬಳಸಲು ನಿರ್ಧರಿಸಿದೆ. ಮತದಾರರ ಪಟ್ಟಿಯನ್ನು ಸಿದ್ದಪಡಿಸುವ ಜವಾಬ್ದಾರಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ವಹಿಸಲು ತೀರ್ಮಾನಿಸಿದೆ ಎಂದರು.
2025–26 ನೇ ಸಾಲಿನಲ್ಲಿ ‘ಶುಚಿ’ ಕಾರ್ಯಕ್ರಮದಡಿ ಸ್ಯಾನಿಟರಿ ನ್ಯಾಪ್ಕಿನ್‌ ಪ್ಯಾಡ್‌ ಗಳು ಹಾಗೂ ಮುಟ್ಟಿನ ಕಪ್‌ ಗಳನ್ನು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಸರ್ಕಾರಿ, ಅನುದಾನಿತ ಶಾಲೆಗಳು, ಕಾಲೇಜುಗಳು ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿನ ಹೆಣ್ಣು ಮಕ್ಕಳಿಗೆ ವಿತರಿಸಲು ಹೊರಡಿಸಿರುವ ಆದೇಶಗಳಿಗೆ ಘಟನೋತ್ತರ ಅನುಮೋದನೆ ನೀಡಲಾಗಿದೆ.
ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರಪಾಲಿಕೆಗಳಲ್ಲಿ ‘ಸಾರಥಿ’ ಯೋಜನೆಯಡಿ ಆಟೋ ರಿಕ್ಷಾ ಅಥವಾ ಕಾರುಗಳನ್ನು ಖರೀದಿಸಲು ಒಟ್ಟು ರೂ.19.18 ಕೋಟಿ ಸಹಾಯಧನ ಹಾಗೂ ಇ–ವೆಂಡಿಂಗ್‌ ಯೋಜನೆ ಅಡಿಯಲ್ಲಿ ಇ–ವೆಂಡಿಂಗ್‌ ವಾಹನಗಳನ್ನು ಖರೀದಿಸಲು ರೂ.₹42.84 ಕೋಟಿ ಸಹಾಯಧನವನ್ನು ಅರ್ಹ ಫಲಾನುಭವಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಒದಗಿಸುವ ಯೋಜನೆಗೆ ಅನುಮೋದನೆ ನೀಡಲಾಗಿದೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಮಾನವ– ವನ್ಯಜೀವಿ ಸಂಘರ್ಷ ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್‌ ನಿರ್ಮಾಣ ಕಾಮಗಾರಿ ಕೈಗೊಳ್ಳಲು ರೂ.1.65 ಕೋಟಿ ಬಿಡುಗಡೆ ಮಾಡಲಾಗಿದೆ.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ರೂ.16 ಕೋಟಿ ಅಂದಾಜು ವೆಚ್ಚದಲ್ಲಿ ನೂತನ ಸೌಪರ್ಣಿಕಾ ಅತಿಥಿಗೃಹ ನಿರ್ಮಾಣಕ್ಕೆಒಪ್ಪಿಗೆ; ಒತ್ತುವರಿಯಾಗಿರುವ 328 ದೇವಾಲಯಗಳ ಆಸ್ತಿಗಳನ್ನು ಸಂರಕ್ಷಿಸಲು ಒತ್ತುವರಿ ತೆರವುಗೊಳಿಸಿ ಭೂ ವರಾಹ ಯೋಜನೆಯಡಿ ಈ ದೇವಾಲಯಗಳ ಸ್ಥಿರಾಸ್ತಿಗಳನ್ನು ದಾಖಲೀಕರಣ ಕಾರ್ಯಕ್ಕಾಗಿ ರೂ.15 ಕೋಟಿ ಯೋಜನೆಗೆ ಅನುಮತಿ ನೀಡಲಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.