ಬಳ್ಳಾರಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಈ ಬಗ್ಗೆ ಪ್ರಶ್ನೆಗೆ ಮುಂದಾದರೆ ಕಾಂಗ್ರೆಸ್ ಶಾಸಕ ನನ್ನನ್ನ ಟಾರ್ಗೆಟ್ ಮಾಡುವ ಭೀತಿ: ರಕ್ಷಣೆ ಕೊಡಿ ಎಂದು ಮನವಿ ಮಾಡಿದ ಮೇಲ್ಮನೆ ಸದಸ್ಯ ಸತೀಶ್
ಬೆಂಗಳೂರು: ಬಳ್ಳಾರಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಇದಕ್ಕೆ ಕಾರಣರಾದ ಕಾಂಗ್ರೆಸ್ ಶಾಸಕರನ್ನ ಪ್ರಶ್ನಿಸಿದರೆ ನನ್ನನ್ನ ಟಾರ್ಗೆಟ್ ಮಾಡುತ್ತಾರೆ. ಹೀಗಾಗಿ ರಕ್ಷಣೆ ನೀಡಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಬಿಜೆಪಿ ಸದಸ್ಯ ವೈ.ಎಂ.ಸತೀಶ್ ಮನವಿ ಮಾಡಿಕೊಂಡಿದ್ದಾರೆ.
ವಿಧಾನಪರಿಷತ್ ನಲ್ಲಿ ರಾಜ್ಯಪಾಲರ ಭಾಷಣ ಕುರಿತ ವಂದನಾನಿರ್ಣಯ ವೇಳೆ ಮಾತನಾಡಿದ ಸತೀಶ್, ವಾಲ್ಮೀಕಿ ಮಹರ್ಷಿ ಅವರ ಬ್ಯಾನರ್ ಕಟ್ಟುವ ವಿಚಾರವಾಗಿ ಜ.1ರಂದು ನಡೆದ ಗಲಾಟೆಯಲ್ಲಿ ಗುಂಡು ತಗುಲಿ ಓರ್ವ ಸಾವನ್ನಪ್ಪಿದ್ದರು. ಘಟನೆ ವೇಳೆ ಶಾಸಕರ ವರ್ತನೆ ಹೇಗಿತ್ತು ಎಂಬುದು ಜಗ್ಗಜಾಹೀರಾಗಿದೆ. ಘಟನೆ ವಿರೋಧಿಸಿದರೆ ಶಾಸಕರು ನನ್ನನ್ನ ಟಾರ್ಗೆಟ್ ಮಾಡಲಿದ್ದಾರೆ. ಹೀಗಾಗಿ ನನಗೆ ಹೆಚ್ಚುವರಿಯಾಗಿ ಭದ್ರತಾ ಸಿಬ್ಬಂದಿ ಬೇಕು ಎಂದು ಮನವಿ ಮಾಡಿದರು.
ವಾಲ್ಮೀಕಿ ಪ್ರತಿಮೆ ಅನಾವರಣ ಸಂದರ್ಭದಲ್ಲಿ ಗಲಾಟೆ ಆಗಿದೆ. ಯಾವುದೇ ಮನವಿಯನ್ನ ಸರ್ಕಲ್ ನಲ್ಲಿ ಅನಾವರಣ ಮಾಡಕೂಡದೆಂದು ಸುಪ್ರೀಂಕೋರ್ಟ್ ಆದೇಶವಿದೆ. ಹೀಗಿದ್ದರೂ ಪ್ರತಿಮೆ ಅನಾವರಣಕ್ಕೆ ಅನುಮತಿ ಕೊಟ್ಟಿದ್ದು ಯಾರು ? ಇದನ್ನ ಕಾರ್ಯರೂಪಗೊಳಿಸಲು ಅನುದಾನ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
ಪ್ರತಿಮೆ ಅನಾವರಣ ವಿರುದ್ಧ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ವಾಲ್ಮೀಕಿ ವಿರೋಧಿ ಎನ್ನಿಸಿಕೊಳ್ಳಬೇಕು. ಈ ಬಗ್ಗೆ ಸ್ಥಳೀಯ ಶಾಸಕ ಭರತ್ ರೆಡ್ಡಿ ಅವರನ್ನ ಪ್ರಶ್ನಿಸಲು ಮುಂದಾದರೆ ನಾನು ಟಾರ್ಗೆಟ್ ಆಗುತ್ತೇನೆ ಎಂದರು.
ಬ್ಯಾನರ್ ಗಲಾಟೆ ಬಳಿಕ ಅಧಿಕಾರ ಸ್ವೀಕರಿಸಿದ ಮೊದಲ ದಿನದಂದೇ ಎಸ್ಪಿಯನ್ನ ವರ್ಗಾವಣೆ ಮಾಡಲಾಗಿದೆ. ಎರಡು ದಿನಗಳ ಹಿಂದೆ ಎಎಸ್ಪಿಯನ್ನ ಟ್ರಾನ್ಸ್ ಫರ್ ಮಾಡಲಾಗಿದೆ. ಬಳ್ಳಾರಿಯಲ್ಲಿ ಸರ್ಕಾರ ಸುಪ್ರೀಂ ಇದೆಯಾ ? ಅಥವಾ ಬಳ್ಳಾರಿ ಶಾಸಕರ ಸುಪ್ರೀಂ ಇದ್ದಾರಾ ಎಂದು ಪ್ರಶ್ನಿಸಬೇಕಿದೆ. ಬಳ್ಳಾರಿಯಲ್ಲಿ ಡ್ರಗ್ಸ್, ಜೂಜಾಟ ಹೆಚ್ಚಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನಾನು ಯಾವಾಗಲೂ ಒಬ್ಬನೇ ಓಡಾಡುತ್ತೇನೆ. ಹೀಗಾಗಿ ನನಗೆ ಇರುವ ಪಿಎಸ್ ಜೊತೆಗೆ ಹೆಚ್ಚುವರಿ ಪಿಎಸ್ ಕೊಡಿ ಎಂದು ಕೋರಿದರು.