ಬಳ್ಳಾರಿ: ಅಕ್ರಮ ಪಡಿತರ ಅಕ್ಕಿ ಸಾಗಾಣೆ ಮಾಡುವವರಿಂದ 3 ಲಕ್ಷ ರೂ. ಲಂಚ ಹಣ ವಸೂಲಿ ಮಾಡಿದ ಆರೋಪದಡಿಯಲ್ಲಿ ಬಳ್ಳಾರಿ ಎಸ್. ಪಿ. ಸುಮನ್ ಪನ್ನೇಕರ್ ಗನ್ ಮ್ಯಾನ್ ಸೇರಿ ಮೂವರನ್ನು ಬಂಧಿಸಲಾಗಿದೆ.
ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿದ್ದ ಶರಭಯ್ಯ ಎಂಬಾತ ಮೋಕಾ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನನ್ವಯ ಬಳ್ಳಾರಿ ಎಸ್ ಪಿ ಸುಮನ್ ಪನ್ನೇಕರ್ ಅವರ ಗನ್ ಮ್ಯಾನ್ ದೇವರಾಜ್ ಹಾಗೂ ಆತನ ಸಹಚರರ ವಿರುದ್ಧ ಪ್ರಕರಣ ದಾಖಲಾಗಿದೆ.
ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪಡಿತರ ಅಕ್ಕಿ ತುಂಬಿಕೊಂಡು ಎರಡು ಲಾರಿಗಳ ಸಮೇತ ಆಂಧ್ರಪ್ರದೇಶಕ್ಕೆ ಹೊರಟಿದ್ದಾಗ ಅಡ್ಡಗಟ್ಟಿ ಎಸ್ ಪಿ ಸ್ಕ್ವಾಡ್ ಹೆಸರಿನಲ್ಲಿ ಗನ್‌ಮ್ಯಾನ್ ದೇವರಾಜ್ 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ. ಹಣ ನೀಡದಿದ್ದರೆ ಮಾಲು ಸಹಿತ ಲಾರಿಗಳನ್ನು ಜಪ್ತಿ ಮಾಡಿ, ಜೈಲಿಗೆ ಕಳಿಸುವುದಾಗಿ ಬೆದರಿಕೆ ಹಾಕಿದ್ದ. ಅಂತಿಮವಾಗಿ 3 ಲಕ್ಷ ರೂ.ಗೆ ಒಪ್ಪಿಕೊಂಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಗಡಿ ಜಿಲ್ಲೆಯಲ್ಲಿ ಅಕ್ಕಿ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಪೋಲಿಸರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಮಧ್ಯೆ ಎಸ್ ಪಿ ಹೆಸರಿನಲ್ಲಿ ಗನ್‌ಮ್ಯಾನ್ ದೇವರಾಜ್ ದಂಧೆಕೋರರಿಂದ ಹಣ ವಸೂಲಿಗೆ ಇಳಿದಿರುವುದು ಅಚ್ಚರಿ ಮೂಡಿಸಿದೆ. ವಸೂಲಿ ಮಾಡಿರುವುದು ಖಚಿತವಾದ ಕೂಡಲೇ ಗನ್‌ಮ್ಯಾನ್ ಬಂಧಿಸಲು ಸ್ವತಃ ಎಸ್ ಪಿ ಅವರೇ ಸೂಚನೆ ನೀಡಿದ್ದರು.