2026-05-04 05:35:31

background of vijay, childhood to till this date |ವಿಜಯ್‌ ಅವರ ಹಿನ್ನೆಲೆ ಏನು? ಬಾಲ್ಯದಿಂದ ಇದುವರೆಗಿನ ಅವರ ಚಿತ್ರಣ ಇಲ್ಲಿದೆ Speed News Kannada

background of vijay, childhood to till this date |ವಿಜಯ್‌ ಅವರ ಹಿನ್ನೆಲೆ ಏನು? ಬಾಲ್ಯದಿಂದ ಇದುವರೆಗಿನ ಅವರ ಚಿತ್ರಣ ಇಲ್ಲಿದೆ Speed News Kannada

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹುದ್ದೆಗೆ ಕೈಅಳತೆಯ ದೂರಲ್ಲಿರುವ ಖ್ಯಾತ ನಟ ‘ತಮಿಳಗ ವೆಟ್ಟಿ ಕಳಗಂ’ (ಟಿವಿಕೆ) ಪಕ್ಷದ ಮುಖಂಡ ವಿಜಯ್‌ ಜೋಸೆಫ್‌ ಅವರನ್ನು ಕುರಿತಾದ ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ.

 

ಜೋಸೆಫ್ ವಿಜಯ್ ‘ದಳಪತಿ’ಯಾದ ಕಥೆ:

ವಿಜಯ್‌ ಜನನ ಜೂನ್ 22, 1974 ರಂದು. ಇವರ ಪೂರ್ಣ ಹೆಸರು ಜೋಸೆಫ್ ವಿಜಯ್ ಚಂದ್ರಶೇಖರ್. ಮೂಲತಃ ಸಿನಿಮಾ ಕುಟುಂಬದ ಹಿನ್ನೆಲೆಯಿಂದ ಬಂದವರು. ತಂದೆ ಎಸ್.ಎ. ಚಂದ್ರಶೇಖರ್ ಖ್ಯಾತ ನಿರ್ದೇಶಕರಾದರೆ, ತಾಯಿ ಶೋಭಾ ಚಂದ್ರಶೇಖರ್ ಪ್ರತಿಭಾವಂತ ಹಿನ್ನೆಲೆ ಗಾಯಕಿ. ಸಹಜವಾಗಿಯೇ ಮನೆಯಲ್ಲಿದ್ದ ಸಿನಿ ವಾತಾವರಣವು ವಿಜಯ್ ಅವರನ್ನು ಬಾಲ್ಯದಲ್ಲೇ ಚಿತ್ರಲೋಕದತ್ತ ಸೆಳೆದಿದ್ದು ಅಚ್ಚರಿಯೇನಲ್ಲ.

ವಿಜಯ್‌ ಶಾಲಾ ಶಿಕ್ಷಣವನ್ನು ಚೆನ್ನೈನ ಫಾತಿಮಾ ಮತ್ತು ಬಾಲಲೋಕ್ ಶಾಲೆಯಲ್ಲಿ ಪೂರ್ಣಗೊಳಿಸಿದರು. ಓದಿನಲ್ಲಿ ಅಷ್ಟಾಗಿ ಆಸಕ್ತಿ ಇಲ್ಲದಿದ್ದರೂ ನಟನೆಯಲ್ಲಿ ಅವರಿಗಿದ್ದ ಉತ್ಸಾಹ ಅಪರಿಮಿತವಾಗಿತ್ತು ಚೆನ್ನೈನ ಪ್ರತಿಷ್ಠಿತ ಲೊಯೊಲಾ ಕಾಲೇಜಿನಲ್ಲಿ ‘ವಿಶುವಲ್ ಕಮ್ಯುನಿಕೇಶನ್’  ಪದವಿಗೆ ಸೇರಿದರಾದರೂ ಅವರ ಗಮನ ಸಂಪೂರ್ಣವಾಗಿ ಬೆಳ್ಳಿಪರದೆಯ ಮೇಲೆ ನೆಟ್ಟಿತ್ತು.

ಕಾಲೇಜು ದಿನಗಳಲ್ಲೇ ವಿಜಯ್‌ ಅವರಿಗೆ ಸಿನಿಮಾಗಳಲ್ಲಿ ನಟಿಸಲು ಸಾಲು ಸಾಲು ಅವಕಾಶಗಳು ಬರಲಾರಂಭಿಸಿದವು. ಸಿನಿಮಾ ಓದಿ ಎರಡನ್ನೂ ಒಟ್ಟಿಗೆ ನಿಭಾಯಿಸುವುದು ಕಷ್ಟ ಎಂದು ಅರಿತ ವಿಜಯ್‌, ನಟನೆಯೇ ತಮ್ಮ ಜೀವನದ ಗುರಿ ಎಂದು ನಿರ್ಧರಿಸಿದರು.

ಸಿನಿಲೋಕಕ್ಕೆ ಪಾದಾರ್ಪಣೆ:

ತಮ್ಮ 18ನೇ ವಯಸ್ಸಿನಲ್ಲಿ ‘ನಾಳಯ ತೀರ್ಪು’ ಚಿತ್ರದ ಮೂಲಕ ನಾಯಕ ನಟನಾಗಿ ಪಾದಾರ್ಪಣೆ ಮಾಡಿದ ವಿಜಯ್, ಇದುವರೆಗೆ 69 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಂದೂ ಸಹ ಅವರು ದಕ್ಷಿಣ ಭಾರತದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು. ಚಿತ್ರರಂಗಕ್ಕೆ ಅವರು ನೀಡಿದ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ 2007ರಲ್ಲಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.

ರಾಜಕೀಯ ಪ್ರವೇಶ:

2009ರಲ್ಲಿ ‘ವಿಜಯ್ ಮಕ್ಕಳ್ ಅಯ್ಯಕಂ’ ಎಂಬ ಅಭಿಮಾನಿ ಸಂಘಟನೆಯ ಮೂಲಕ ಸಮಾಜ ಸೇವೆ ಆರಂಭಿಸಿದ ವಿಜಯ್, ಎರಡು ವರ್ಷಗಳ ಹಿಂದೆಯಷ್ಟೇ  ‘ಟಿವಿಕೆ’ ಪಕ್ಷವನ್ನು ಸ್ಥಾಪಿಸಿದರು. ಅವರ ಸಿನಿಮಾ ವರ್ಚಸ್ಸು ಈಗ ಮತಗಳಾಗಿ ಪರಿವರ್ತನೆಯಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಸುಮಾರು ಐದು ದಶಕಗಳ ಕಾಲ ತಮಿಳುನಾಡಿನ ಜನ ಡಿಎಂಕೆ ಮತ್ತು ಡಿಎಂಡಿಕೆ ಪಕ್ಷಗಳ ಆಡಳಿತದಿಂದ ಬೇಸತ್ತಿದ್ದರು. ಸುದೀರ್ಘ ಅವಧಿಗೆ ಎಂಜಿಆರ್‌, ಕರುಣಾನಿಧಿ, ಜಯಲಲಿತಾ ಅವರ ಆಡಳಿತ ವೈಖರಿಗೆ ಜಡ್ಡುಗಟ್ಟಿ ಹೋಗಿದ್ದರು. ಪರ್ಯಾಯವೇ ಇಲ್ಲ ಎಂದು ಭಾವಿಸಿದಾಗ ವಿಜಯ್‌ ಕೋಲ್ಮಿಂಚಿನಂತೆ ಕಂಡರು. ಮತದಾರರು ಕೈಹಿಡಿದರು.

 

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.