ಬೆಂಗಳೂರು: ಬೆಂಗಳೂರು ನಿವಾಸಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ಕೊಟ್ಟಿದೆ. ನಮ್ಮ ಖಾತೆ ನಮ್ಮ ಹಕ್ಕು ಅಭಿಯಾನದ ಮೂಲಕ ಆಸ್ತಿ ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಬೃಹತ್ ಯೋಜನೆಗೆ ಅಸ್ತು ಎಂದಿದೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ನಗರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದ ನಾಗರಿಕ ಸ್ನೇಹಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಗರದಲ್ಲಿ ಒಟ್ಟು 23 ಲಕ್ಷ ಆಸ್ತಿಗಳಿದ್ದು, ಇವುಗಳ ದಾಖಲೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿ, ಪಾರದರ್ಶಕತೆ ತರಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.
ಮನೆ ಬಾಗಿಲಿಗೆ ಆಸ್ತಿ ದಾಖಲೆ
ಸರ್ಕಾರವು ಇದನ್ನು ಆರನೇ ಗ್ಯಾರಂಟಿ ಎಂದು ಘೋಷಿಸಿದ್ದು, ಪ್ರತಿಯೊಬ್ಬ ಆಸ್ತಿ ಮಾಲೀಕರಿಗೆ ಅವರ ಹಕ್ಕಿನ ದಾಖಲೆಗಳನ್ನು ತಲುಪಿಸುವ ಗುರಿ ಹೊಂದಲಾಗಿದೆ. ಪ್ರತಿಯೊಂದು ಆಸ್ತಿಯನ್ನು ಜಿಪಿಎಸ್ ಮೂಲಕ ಮ್ಯಾಪಿಂಗ್ ಮಾಡಿ, ಆಸ್ತಿ ಲೊಕೇಶನ್ ಮತ್ತು ಮಾಲೀಕರ ಫೋಟೋ ಇರುವ ದಾಖಲೆಗಳನ್ನು ಸಿದ್ಧಪಡಿಸಲಾಗುತ್ತದೆ. ನಕಲಿ ದಾಖಲೆ ಸೃಷ್ಟಿ ತಡೆಯಲು ಈಗಾಗಲೇ 7 ಸಾವಿರಕ್ಕೂ ಹೆಚ್ಚು ಪ್ರಮುಖ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗಿದೆ. ಮೇ. 16ರಿಂದ ಈ ಅಭಿಯಾನ ಆರಂಭವಾಗಲಿದ್ದು, ಅಧಿಕಾರಿಗಳು ಮತ್ತು ಗ್ಯಾರಂಟಿ ಯೋಜನೆಯ ಸದಸ್ಯರು ಮನೆ ಮನೆಗೆ ಭೇಟಿ ನೀಡಿ ಇ ಖಾತಾ ಮಾಡಿಕೊಡಲಿದ್ದಾರೆ ಎಂದರು.
100 ದಿನಗಳ ಗಡುವು:
ಸಧ್ಯ 16 ಲಕ್ಷ ʼಎʼ ಖಾತೆ ಹಾಗೂ 7 ಲಕ್ಷ ʼಬಿʼ ಖಾತೆಗಳಿವೆ. ಬಿ ಖಾತೆ ಹೊಂದಿರುವವರು ತಮ್ಮ ಆಸ್ತಿಯನ್ನು ಎ ಖಾತೆಗೆ ಪರಿವರ್ತಿಸಿಕೊಳ್ಳಲು ರಿಯಾಯಿತಿ ಘೋಷಿಸಲಾಗಿದೆ. ಈ ಹಿಂದೆ ಬಿ ಖಾತೆಯಿಂದ ಎ ಖಾತೆ ಮಾಡಿಸಿಕೊಳ್ಳಲು ಮಾರ್ಗಸೂಚಿ ದರದ ಶೇ.5 ರಷ್ಟು ಮೊತ್ತವನ್ನು ಪಾವತಿಸಬೇಕಿತ್ತು. ಈಗ ಈ ಶುಲ್ಕವನ್ನು ಕೇವಲ ಶೇ.2ಕ್ಕೆ ಕ್ಕೆ ಇಳಿಸಲಾಗಿದೆ. ಇದರಿಂದ ರೂ. 5 ಲಕ್ಷ ಪಾವಿತಿಸಬೇಕಿದ್ದ ಜಾಗದಲ್ಲಿ ಈಗ ಕೇವಲ 2 ಲಕ್ಷ ರೂ. ಪಾವತಿಸಿದರೆ ಸಾಕಾಗುತ್ತದೆ. ಈ ರಿಯಾಯಿತಿ ಕೇವಲ 100 ದಿನಗಳವರೆಗೆ ಮಾತ್ರ ಲಭ್ಯವಿದ್ದು, ಅವಧಿಯ ನಂತರ ಶುಲ್ಕವು ಪುನಃ 5% ಕ್ಕೆ ಏರಿಕೆಯಾಗಲಿದೆ.
ಜೂನ್ 15 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಮೂರು ತಿಂಗಳ ಕಾಲಾವಕಾಶವಿರುತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 10 ಕಡೆಗಳಲ್ಲಿ (ಶಾಲೆ, ಸರ್ಕಾರಿ ಜಾಗ) ಒಟ್ಟು 50 ಜಾಗಗಗಳಲ್ಲಿ ವಿಶೇಷ ಕಚೇರಿಗಳನ್ನು ತೆರೆಯಲಾಗುತ್ತದೆ. ಪ್ರತಿ ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಶಾಲೆಗಳು ಸೇರಿದಂತೆ ಗುರುತಿಸಲಾದ 10 ಸಾರ್ವಜನಿಕ ಸ್ಥಳಗಳಲ್ಲಿ ಅಧಿಕಾರಿಗಳು ಲಭ್ಯವಿರುತ್ತಾರೆ. ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಇದ್ದರೂ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿ ದಾಖಲೆ ಸರಿಪಡಿಸಿಕೊಡಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಿಡಿಎ ಅಧ್ಯಕ್ಷ ಹ್ಯಾರಿಸ್, ಸಚಿವ ಕೆ.ಜೆ ಜಾರ್ಜ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಆಡಳಿತಾಧಿಕಾರಿ ಮಹೇಶ್ವರ್ ರಾವ್ ಪಾಲ್ಗೊಂಡಿದ್ದರು.