ಬೆಂಗಳೂರು: ಪ್ರಿಯಕರನ ಸಾಲ ತೀರಿಸುವ ಸಲುವಾಗಿ ಮಹಿಳೆಯೊಬ್ಬಳು ಬರೋಬ್ಬರಿ 3.4 ಲಕ್ಷ ರೂ. ಮೌಲ್ಯದ 35 ಗ್ರಾಂ ಚಿನ್ನಾಭರಣ ದೋಚಿರುವ ಘಟನೆ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಾಬುಸಾಪಾಳ್ಯದಲ್ಲಿ ನಡೆದಿದೆ. ಇದೀಗ ಮಹಿಳೆಯನ್ನು ಬಂಧಿಸಿರುವ ಪೊಲೀಸರು ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ.
ಬಂಧಿತ ಆರೋಪಿತೆಯನ್ನು ಪ್ರಮೀಳಾ ಹಾಗೂ ಆಕೆಯ ಪ್ರಿಯಕರನನ್ನು ಸುಧಾಕರ್ ಎಂದು ಗುರುತಿಸಲಾಗಿದೆ. ಮಹಿಳೆ ಚಿನ್ನಾಭರಣವನ್ನು ಕದ್ದು, ಅದನ್ನು ಮಾರಾಟ ಮಾಡಿ, ಬಂದ ಹಣವನ್ನು ಪ್ರಿಯಕರನಿಗೆ ನೀಡಿದ್ದಳು ಎಂದು ತಿಳಿದುಬಂದಿದೆ.ಆರೋಪಿ ಪ್ರಮೀಳಾಗೆ ಮೊದಲೇ ಒಂದು ಮದುವೆಯಾಗಿ, ಗಂಡನನ್ನು ಬಿಟ್ಟಿದ್ದಾಳೆ. ಅತ್ತ ಆಕೆಯ ಪ್ರಿಯಕರನಿಗೆ ಮದುವೆಯಾಗಿ ಎರಡು ಮಕ್ಕಳಿವೆ. ಇಬ್ಬರು ಬೊಮ್ಮನಹಳ್ಳಿಯ ಗಾರ್ಮೆಂಟ್ನಲ್ಲಿ ಕೆಲಸ ಮಾಡುತ್ತಿದ್ದಾಗ ಪರಸ್ಪರ ಪರಿಚಯವಾಗಿತ್ತು. ನಂತರ ಸಂಬಂಧ ಪ್ರೀತಿಗೆ ತಿರುಗಿತ್ತು.
ನಂತರ ಮಹಿಳೆ ಅಲ್ಲಿ ಕೆಲಸ ಬಿಟ್ಟು ಖಾಸಗಿ ಅಪಾರ್ಟೆಂಟ್‌ನಲ್ಲಿ ಮನೆಕೆಲಸ ಮಾಡುತ್ತಿದ್ದಳು. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಸುಧಾರಕ್ ಪ್ರಮೀಳಾಗೆ ಸಾಲ ತೀರಿಸಲು 20 ಸಾವಿರ ರೂ. ಕೇಳಿದ್ದ. ಆಗ ಆಕೆ ತಾನು ಕೆಲಸ ಮಾಡುತ್ತಿದ್ದ ಮಾಲೀಕರ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿ, ಮಾರಾಟ ಮಾಡಿ ಪ್ರಿಯಕರನಿಗೆ ಹಣ ಕೊಟ್ಟಿದ್ದಳು.
ಆದರೆ ಚಿನ್ನಾಭರಣ ಕಳ್ಳತನವಾಗಿರುವ ವಿಚಾರ ಮನೆ ಮಾಲೀಕರಿಗೆ ಒಂದು ತಿಂಗಳ ನಂತರ ತಿಳಿದು ಬಂದಿದೆ. ನಂತರ ಅವರು ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದಾದ ಬಳಿಕ ಪೊಲೀಸರು ಮನೆಕೆಲಸದಾಕೆಯನ್ನು ವಿಚಾರಿಸಿದ್ದರು. ಆಗ ಆಕೆ ತನಗೇನೂ ಗೊತ್ತೇ ಇಲ್ಲ ಎಂಬಂತೆ ನಾಟಕವಾಡಿದ್ದಳು. ಆದರೆ ನಂತರ ಪೊಲೀಸ್ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಾಯಿಬಿಟ್ಟಿದ್ದಾಳೆ.ಪ್ರಮಿಳಾ ವಿಚಾರಣೆ ವೇಳೆ ತಾನು ಕದ್ದ ಚಿನ್ನಾಭರಣವನ್ನು ಬೊಮ್ಮನಹಳ್ಳಿಯ ಚಿನ್ನದ ಅಂಗಡಿಗಳಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾಳೆ. ನಂತರ ಪೊಲೀಸರು ಒಟ್ಟು 3.4 ಲಕ್ಷ ರೂ. ಮೌಲ್ಯದ 35 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ ಪ್ರಮಿಳಾಳ ಪ್ರಿಯಕರ ಸುಧಾಕರ್ ಪ್ರಸ್ತುತ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.