2026-04-23 09:22:39

Anushka Shettys grand entry into Malayalam cinema | ಮಲಯಾಳಂ ಚಿತ್ರರಂಗಕ್ಕೆ ಅನುಷ್ಕಾ ಶೆಟ್ಟಿ ಭರ್ಜರಿ ಎಂಟ್ರಿ | Speed News Kannada

Anushka Shettys grand entry into Malayalam cinema | ಮಲಯಾಳಂ ಚಿತ್ರರಂಗಕ್ಕೆ ಅನುಷ್ಕಾ ಶೆಟ್ಟಿ ಭರ್ಜರಿ ಎಂಟ್ರಿ | Speed News Kannada

ಕರ್ನಾಟಕ ಮೂಲದ ನಟಿ ಅನುಷ್ಕಾ ಶೆಟ್ಟಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ದಶಕಕ್ಕೂ ಹೆಚ್ಚು ಕಾಲ ಸ್ಟಾರ್ ನಟಿಯಾಗಿ ಮೆರೆದವರು. ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಭಾರೀ ಯಶಸ್ಸು ಕಂಡ ಅವರು, ವಿಶೇಷವಾಗಿ ಮಹಿಳಾ ಪ್ರಧಾನ ಕಥೆಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. 'ಅರುಂಧತಿ'ಂಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನ ಗೆದ್ದ ಅನುಷ್ಕಾ ಇತ್ತೀಚೆಗೆ ಸಿನಿಮಾಗಳಿಂದ ಸ್ವಲ್ಪ ದೂರ ಉಳಿದಿದ್ದರು. ಆದರೆ ಈಗ ಅವರು ಭರ್ಜರಿ ಕಂಬ್ಯಾಕ್ ಮಾಡಲು ಸಜ್ಜಾಗಿದ್ದು, ಅದಕ್ಕೆ ಮೊದಲ ಹೆಜ್ಜೆಯಾಗಿ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಅವರ ಮೊದಲ ಮಲಯಾಳಂ ಸಿನಿಮಾ 'ಕಥನಾರ್' ಟ್ರೈಲರ್ ಈಗ ಬಿಡುಗಡೆ ಆಗಿದ್ದು. ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಸುಮಾರು 2 ನಿಮಿಷ 58 ಸೆಕೆಂಡ್‌ಗಳ ಈ ಟ್ರೈಲ‌ರ್, ಒಂದು ವಿಭಿನ್ನ ಫ್ಯಾಂಟಸಿ-ಹಾರರ್ ಲೋಕಕ್ಕೆ ಕರೆದೊಯ್ಯುತ್ತದೆ.
ಕೇರಳದ ಜಾನಪದ ಕಥೆಗಳಲ್ಲಿ ಪ್ರಸಿದ್ಧನಾದ ಮಾಂತ್ರಿಕ ಪಾದ್ರಿ 'ಕಡಮತ್ತತ್ತು ಕಥನಾರ್' ಜೀವನ ಆಧರಿಸಿ ಈ ಸಿನಿಮಾ ರೂಪಿಸಲಾಗಿದೆ. ಆದರೆ ಇದು ಸಾಂಪ್ರದಾಯಿಕ ಕಥನವಾಗಿರದೆ, ಆಧುನಿಕ ತಂತ್ರಜ್ಞಾನ ಮತ್ತು ಭಯಾನಕ ಅಂಶಗಳನ್ನು ಮಿಶ್ರಣ ಮಾಡಿದ ವಿಭಿನ್ನ ಪ್ರಯತ್ನವಾಗಿದೆ. ಚಿತ್ರದಲ್ಲಿ ಸಿಜಿಐ ಮತ್ತು ವಿಎಫ್‌ಎಕ್ಸ್ ಬಳಕೆ ಗಮನಾರ್ಹವಾಗಿದ್ದು, ದೃಶ್ಯ ವೈಭವಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ರೋಜನ್ ಥಾಮಸ್ ನಿರ್ದೇಶನದ ಈ  ಚಿತ್ರಕ್ಕೆ ರಾಹುಲ್ ಸುಬ್ರಮಣಿಯನ್ ಸಂಗೀತ ನೀಡಿದ್ದಾರೆ. ಈ ಸಿನಿಮಾದಲ್ಲಿ ಜಯಸೂರ್ಯ ನಾಯಕನಾಗಿ ಕಾಣಿಸಿಕೊಂಡಿದ್ದು, ಅನುಷ್ಕಾ ಶೆಟ್ಟಿ 'ನೀಲಿ' ಎಂಬ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಪ್ರಭುದೇವ, ವಿನೀತ್ ಮತ್ತು ಸಂದೀಪ್ ಮಾಸ್ಟರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇನ್ನೂ ವಿಶೇಷವೆಂದರೆ, ಮಲಯಾಳಂ ಸೂಪರ್‌ಸ್ಮಾರ್ ಮೋಹನ್‌ಲಾಲ್ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾಹಿತಿ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ. 'ಶ್ರೀ ಗೋಕುಲಂ ಮೂವೀಸ್' ಬ್ಯಾನರ್ ಅಡಿಯಲ್ಲಿ ಗೋಕುಲಂ ಗೋಪಾಲನ್ ನಿರ್ಮಿಸಿರುವ ಈ ಸಿನಿಮಾ ಮಲಯಾಳಂ ಮಾತ್ರವಲ್ಲದೆ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆ. ಅನುಷ್ಕಾ ಶೆಟ್ಟಿ ಅವರ ಕರಿಯರ್‌ನಲ್ಲಿ ಇದು ಹೊಸ ಅಧ್ಯಾಯವಾಗಿದ್ದು, ಈ ಸಿನಿಮಾ ಅವರ ಕಂಬ್ಯಾಕ್‌ಗೆ ಬಲ ನೀಡಬಹುದೇ ಎಂಬುದು ಈಗ ಪ್ರಮುಖ ಪ್ರಶ್ನೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.