2026-07-23 10:06:01

Another allegation against SIR | SIR ವಿರುದ್ಧ ಮತ್ತೊಂದು ಆರೋಪ ಒಂದೇ ಮತಗಟ್ಟೆಯಲ್ಲಿ 13 ಸಾವಿರಕ್ಕೂ ಹೆಚ್ಚು ಹೆಸರು ಡಿಲೀಟ್? | SNK

Another allegation against SIR | SIR ವಿರುದ್ಧ ಮತ್ತೊಂದು ಆರೋಪ ಒಂದೇ ಮತಗಟ್ಟೆಯಲ್ಲಿ 13 ಸಾವಿರಕ್ಕೂ ಹೆಚ್ಚು ಹೆಸರು ಡಿಲೀಟ್? | SNK

ಬೆಂಗಳೂರು : ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ HSR ಲೇಔಟ್‌ನ 174ನೇ ವಾರ್ಡ್ ವ್ಯಾಪ್ತಿಯ 54ನೇ ಮತಗಟ್ಟೆಯಲ್ಲಿ 13 ಸಾವಿರಕ್ಕೂ ಹೆಚ್ಚು ಅರ್ಹ ಮತದಾರರ ಹೆಸರನ್ನು "UEF - Permanent Shifting" (ಶಾಶ್ವತವಾಗಿ ಸ್ಥಳಾಂತರಗೊಂಡವರು) ಎಂದು ದಾಖಲಿಸಿ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. ಈ ಸಂಬಂಧ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರಿಗೆ ಲಿಖಿತ ದೂರು ಸಲ್ಲಿಸಿರುವ ತೇಜಸ್ವಿ ಸೂರ್ಯ, ಯಾವುದೇ ಭೌತಿಕ ಪರಿಶೀಲನೆ ನಡೆಸದೇ, ಮತಗಟ್ಟೆ ಮಟ್ಟದ ಏಜೆಂಟರಿಗೆ (BLA-2) ಮಾಹಿತಿ ನೀಡದೇ ಅಧಿಕಾರಿಗಳು ಏಕಪಕ್ಷೀಯವಾಗಿ ಸಾವಿರಾರು ಮತದಾರರ ಹೆಸರನ್ನು ಕೈಬಿಟ್ಟಿದ್ದಾರೆ ಎಂದು ದೂರಿದ್ದಾರೆ.

ಸಂಸದರ ಪ್ರಕಾರ, SIR ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಹಲವು ನಿಯಮಗಳನ್ನು ಉಲ್ಲಂಘಿಸಲಾಗಿದೆ. GPS ಆಧಾರಿತ ಫೋಟೋ ಸಾಕ್ಷ್ಯ ಸಂಗ್ರಹಿಸಿಲ್ಲ, ಮನೆಗಳಿಗೆ ಅಂಟಿಸಬೇಕಿದ್ದ Enumeration Stickers ಅಂಟಿಸಿಲ್ಲ ಹಾಗೂ ಮನೆ-ಮನೆಗೆ ಭೇಟಿ ನೀಡದೇ ಸುಳ್ಳು ವರದಿಗಳನ್ನು ಸಿದ್ಧಪಡಿಸಲಾಗಿದೆ ಎಂದು ಆರೋಪಿಸಲಾಗಿದೆ.

"ಇದು ಕೇವಲ ಅಧಿಕಾರಿಗಳ ನಿರ್ಲಕ್ಷ್ಯವಲ್ಲ, ಅಧಿಕಾರದಲ್ಲಿರುವವರ ಕುಮ್ಮಕ್ಕಿನಿಂದ ನಡೆದಿರುವ ಬೃಹತ್ ಚುನಾವಣಾ ಅಕ್ರಮ. ಲಕ್ಷಾಂತರ ಜನರ ಮತದಾನದ ಹಕ್ಕಿಗೆ ಧಕ್ಕೆ ತರುವಂತಹ ಬೆಳವಣಿಗೆ ಇದು. ಇದರ ಹಿಂದೆ ಇರುವವರ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಬೇಕು" ಎಂದು ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.

ಅಲ್ಲದೆ, ಸುಳ್ಳು ವರದಿ ನೀಡಿದ ಅಧಿಕಾರಿಗಳನ್ನು ತಕ್ಷಣ ಅಮಾನತುಗೊಳಿಸಬೇಕು ಹಾಗೂ ಅಕ್ರಮವಾಗಿ ಕೈಬಿಡಲಾಗಿದೆ ಎನ್ನಲಾದ 13 ಸಾವಿರಕ್ಕೂ ಹೆಚ್ಚು ಮತದಾರರ ಮಾಹಿತಿಯನ್ನು ಮರುಪರಿಶೀಲಿಸಿ ಅರ್ಹರ ಹೆಸರನ್ನು ಮತದಾರರ ಪಟ್ಟಿಗೆ ಮರುಸೇರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸದ್ಯ ಈ ಆರೋಪಗಳಿಗೆ ಚುನಾವಣಾ ಅಧಿಕಾರಿಗಳ ಅಧಿಕೃತ ಪ್ರತಿಕ್ರಿಯೆ ಇನ್ನಷ್ಟೇ ಹೊರಬೀಳಬೇಕಿದೆ. ಆರೋಪಗಳ ಸತ್ಯಾಸತ್ಯತೆ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.