2026-06-08 01:33:11

ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ; ಅವರ ಮುಂದಿನ ಗುರಿ ಏನು?|Speed News Kannada

ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ; ಅವರ ಮುಂದಿನ ಗುರಿ ಏನು?|Speed News Kannada

ನವದೆಹಲಿ:  ತಮಿಳುನಾಡಿನ ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರ ರಾಜೀನಾಮೆಯನ್ನು ಪಕ್ಷದ ಹೈಕಮಾಂಡ್‌ ಅಂಗೀಕರಿಸಿದೆ. ಈ ಮೂಲಕ ಬಿಜೆಪಿಯೊಂದಿಗಿನ ಅವರ ಆರು ವರ್ಷಗಳ ಸಂಬಂಧ ಅಂತ್ಯಗೊಂಡಿದೆ. ಅಣ್ಣಾಮಲೈ ಅವರ ರಾಜೀನಾಮೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನವೀನ್‌ ಅಂಗೀಕರಿಸಿದ್ದಾರೆ.

ಕರ್ನಾಟಕ ಕೇಡರ್‌ನ ಮಾಜಿ ಐಪಿಎಸ್‌ ಅಧಿಕಾಯೂ ಆಗಿರುವ ಅಣ್ಣಾಮಲೈ ಅವರು ಜೂನ್ 2ರಂದು ನಿತಿನ್‌ ನವೀನ್‌, ಅಮಿತ್ ಶಾ ಸೇರಿದಂತೆ ಹಿರಿಯ ನಾಯಕರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿ ತಮ್ಮ ನಿರ್ಧಾರಕ್ಕೆ ಕಾರಣವನ್ನೂ ವಿವರಿಸಿದ್ದರು.

ಅಣ್ಣಾಮಲೈ ಬಿಜೆಪಿ ತೊರೆಯಲು ಎಐಎಡಿಎಂಕೆ ಜೊತೆಗಿನ ಮೈತ್ರಿಗೆ ವಿರೋಧ, ರಾಜ್ಯಾಧ್ಯಕ್ಷ ಸ್ಥಾನದಿಂದ ದಿಢೀರ್ ಪದಚ್ಯುತಿ, ವಿಧಾನಸಭಾ ಚುನಾವಣೆಯಲ್ಲಿ ಕಡೆಗಣನೆ, ತ್ರಿಭಾಷಾ ನೀತಿ ಜಾರಿ ಪ್ರಮುಖ ಕಾರಣಗಳು.

ರಾಜೀನಾಮೆ ಅಂಗೀಕಾರದ ನಂತರ ಮಾತನಾಡಿರುವ ಅವರು, ಹೊಸ ರಾಜಕೀಯ ಆಂದೋಲನ ಪ್ರಾರಂಭಿಸುತ್ತಿದ್ದೇನೆ ಮತ್ತು ಈ ಪ್ರಯತ್ನದಲ್ಲಿ ನಿಮ್ಮೆಲ್ಲರ ಬೆಂಬಲವನ್ನು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ. ಈ ಆಂದೋಲದಲ್ಲಿ ನಾಗರಿಕರು ನೇರವಾಗಿ ತೊಡಗಿಸಿಕೊಳ್ಳಬಹುದು ಮತ್ತು ಸಾಮಾನ್ಯ ಜನರ ಆಕಾಂಕ್ಷೆಗಳು ಮತ್ತು ಕಾಳಜಿಗಳನ್ನು ಪ್ರತಿಬಿಂಬಿಸುವ ವೇದಿಕೆ ಇದಾಗಲಿದೆ ಎಂದಿದ್ದಾರೆ.

2021ರಿಂದ 2025ರವರೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ಏರಲಿದೆಎಂಉ ಭಾವಿಸಲಾಗಿತ್ತು.  ಆದರೆ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಜತೆ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದರಿಂದ ಅವರು ಅಸಮಾಧಾನಗೊಂಡಿದ್ದರು. ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕು ಎಂಬ ಷರತ್ತನ್ನೂ ಎಐಎಡಿಎಂಕೆ ವಿಧಿಸಿತ್ತು.

ಎಐಎಡಿಎಂಕೆ ಜತೆ ಹೊಂದಾಣಿಕೆ ಮಾಡಿಕೊಂಡ ನಂತರ ಇದು ಶವಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಚುನಾವಣೆಯಲ್ಲಿ ಮೈತ್ರಿಕೂಟವು ಸೋಲು ಕಂಡಿತ್ತು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.