2026-06-08 01:19:45

along with degrees universities must create confidence to face challenges;cm siddaramaiah| ವಿವಿಗಳು ಪದವಿ ಜತೆಗೆ ಸವಾಲುಗಳನ್ನು ಎದುರಿಸುವ ಆತ್ಮವಿಶ್ವಾಸ ರೂಪಿಸಬೇಕು:ಸಿಎಂ ಸಿದ್ದರಾಮಯ್ಯ |Speed News Kannada

along with degrees universities must create confidence to face challenges;cm siddaramaiah| ವಿವಿಗಳು ಪದವಿ ಜತೆಗೆ ಸವಾಲುಗಳನ್ನು ಎದುರಿಸುವ ಆತ್ಮವಿಶ್ವಾಸ ರೂಪಿಸಬೇಕು:ಸಿಎಂ ಸಿದ್ದರಾಮಯ್ಯ |Speed News Kannada

ಬೆಂಗಳೂರು: ವಿಶ್ವವಿದ್ಯಾಲಯಗಳು ಕೇವಲ ಪದವಿಗಳನ್ನು ನೀಡುವುದಕ್ಕೆ ಸೀಮಿತವಾಗದೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕೌಶಲ್ಯಗಳು, ನಾವೀನ್ಯತೆ ಸಾಮರ್ಥ್ಯ ಮತ್ತು ನೈಜ ಪ್ರಪಂಚದ ಸವಾಲುಗಳನ್ನು ಎದುರಿಸುವ ಆತ್ಮವಿಶ್ವಾಸವನ್ನು ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಅವರು ಇಂದು ಉನ್ನತ ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ  ಕ್ಯಾಂಪಸ್ ಟು ಕೆರಿಯರ್ (ಸಿಟುಸಿ) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

 ಒಂದು ಸಂಸ್ಥೆಯ ನಿಜವಾದ ಅಳತೆಗೋಲು ಅದು ದಾಖಲಿಸಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆಯಲ್ಲ, ಬದಲಾಗಿ ಅದು ಎಷ್ಟು ಜನರ ಜೀವನವನ್ನು ಬದಲಾಯಿಸುತ್ತದೆ ಎಂಬುದರ ಮೇಲಿರುತ್ತದೆ. 'ಕ್ಯಾಂಪಸ್ ಟು ಕೆರಿಯರ್' (Campus to Career) ಶೃಂಗಸಭೆಯು ಈ ಸಮಾನ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಇದು ಭವಿಷ್ಯದ ಸವಾಲುಗಳನ್ನು ಎದುರಿಸಲು ಸಿದ್ಧವಿರುವ ಸಂಸ್ಥೆಗಳನ್ನು ಮತ್ತು ಪದವೀಧರರನ್ನು ರೂಪಿಸಲು ನೀತಿ ನಿರೂಪಕರು, ಶಿಕ್ಷಣ ತಜ್ಞರು ಮತ್ತು ಉದ್ಯಮದ ಮುಖಂಡರನ್ನು ಒಂದೆಡೆ ಸೇರಿಸುತ್ತದೆ ಎಂದಿದ್ದಾರೆ.

ಈ ಶೃಂಗಸಭೆಯು ನೀತಿ ನಿರೂಪಕರು, ಉದ್ಯಮಿಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಕೌಶಲ್ಯಾಭಿವೃದ್ಧಿ ಸಂಸ್ಥೆಗಳನ್ನು ಒಗ್ಗೂಡಿಸುವ ಮೂಲಕ  ಶೈಕ್ಷಣಿಕ ಅಧ್ಯಯನ ಮತ್ತು ಕೈಗಾರಿಕಾ ನಿರೀಕ್ಷೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲಿದೆ. ಶ್ರೀ ನಾರಾಯಣ ಗುರುಗಳು ಪ್ರತಿಪಾದಿಸಿದಂತೆ, ಶಿಕ್ಷಣವು ಘನತೆ, ಸಂಘಟನೆ ಮತ್ತು ಉದ್ಯೋಗಕ್ಕೆ ದಾರಿ ಮಾಡಿಕೊಡಬೇಕು. ಜ್ಞಾನವು ಉದ್ಯೋಗವಾಗುವುದನ್ನು, ಉದ್ಯೋಗವು ಸ್ವಾವಲಂಬನೆಯಾಗುವುದನ್ನು ಮತ್ತು ಸ್ವಾವಲಂಬನೆಯು ಸಾಮಾಜಿಕ ಪರಿವರ್ತನೆ ಹಾಗೂ ಪ್ರಗತಿಗೆ ಅಡಿಪಾಯವಾಗಬೇಕೆನ್ನುವ ದೃಷ್ಟಿಕೋನವನ್ನು ನಮ್ಮ ಈ ಉಪಕ್ರಮವು ಸಾಕಾರಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಡಾ. ಬಿ.ಆರ್. ಅಂಬೇಡ್ಕರ್ ಅವರು ಶಿಕ್ಷಣವನ್ನು ಸಾಮಾಜಿಕ ಬದಲಾವಣೆ, ಸಬಲೀಕರಣ ಮತ್ತು ಎಲ್ಲರಿಗೂ ಮೂಲಭೂತ ಹಕ್ಕು ಎಂದು ಪರಿಗಣಿಸಿದ್ದಾರೆ. ಜ್ಞಾನ, ಕೌಶಲ್ಯ ಅಭಿವೃದ್ಧಿ, ನಾವೀನ್ಯತೆ ಮತ್ತು ಎಲ್ಲರನ್ನೂ ಒಳಗೊಂಡ ಬೆಳವಣಿಗೆಗೆ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಸಮಾನ, ಪ್ರಗತಿಪರ ಮತ್ತು ಸದೃಢ  ಸಮಾಜವನ್ನು ರೂಪಿಸುವಲ್ಲಿ ಶಿಕ್ಷಣವು ಮಹತ್ವದ ಪಾತ್ರ ವಹಿಸುತ್ತದೆ ಎಂದು ಕರ್ನಾಟಕ ಸರ್ಕಾರವೂ

 ನಂಬಿದೆ. ಶಿಕ್ಷಣವು ಪದವಿಗಳನ್ನು ನೀಡುವುದಕ್ಕಿಂತ ಹೆಚ್ಚಿನದನ್ನು ನೀಡಬೇಕೆಂದು  ಕರ್ನಾಟಕ ಸರ್ಕಾರ ದೃಢವಾಗಿ ನಂಬುತ್ತದೆ. ಅದು ಮಾನವ ಸಾಮರ್ಥ್ಯವನ್ನು ತೆರೆಯಬೇಕು,  ಕುತೂಹಲ, ಸೃಜನಶೀಲತೆ, ಸಾಮರ್ಥ್ಯ ಮತ್ತು ವ್ಯಕ್ತಿತ್ವವನ್ನು ಪೋಷಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ, ಅದು ಘನತೆ ಮತ್ತು ಆರ್ಥಿಕ ಭದ್ರತೆಯ ಜೀವನಕ್ಕೆ ಮಾರ್ಗಗಳನ್ನು ಸೃಷ್ಟಿಸಬೇಕು ಎಂದರು.

30.7 ಲಕ್ಷ ಕೋಟಿಗಳ ಜಿಎಸ್ ಡಿಪಿ ಹೊಂದಿರುವ ಕರ್ನಾಟಕ , ದಾಖಲೆಯ ಸೇವಾ ರಫ್ತು ಹೊಂದಿದೆಯಲ್ಲದೆ ಬೆಂಗಳೂರು 875 ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಹೊಂದುವ ಮೂಲಕ ವಿಶ್ವದ ಪ್ರಮುಖ ತಾಂತ್ರಿಕ ಗಮ್ಯತಾಣವಾಗಿದೆ. ಕರ್ನಾಟಕದ ಅಭಿವೃದ್ಧಿ ಮಾದರಿಯಲ್ಲಿ ಶಿಕ್ಷಣ ಸದಾ ಕೇಂದ್ರ ಸ್ಥಾನವನ್ನು ಪಡೆದಿದೆ. ಅದು ನಮ್ಮ ಸರಕಾರದ ಆದ್ಯತಾ ವಲಯವಾಗಿದೆ. ಪ್ರತಿ ಲಕ್ಷ ಜನಸಂಖ್ಯೆಗೆ 66 ಕಾಲೇಜುಗಳನ್ನು ಹೊಂದುವ ಮೂಲಕ ದೇಶದಲ್ಲಿಯೇ ಮುಂಚೂಣಿಯಲ್ಲಿವ ಕರ್ನಾಟಕ, ರಾಜ್ಯದ ಉನ್ನತ ಶಿಕ್ಷಣದ  ಪರಿಸರ ವ್ಯವಸ್ಥೆಯ ಆಳ ಮತ್ತು ಅಗಲಕ್ಕೆ ಕನ್ನಡಿ ಹಿಡಿದಿದೆ ಎಂದು ತಿಳಿಸಿದರು.

ಈ ದಿಸೆಯಲ್ಲಿ ಕರ್ನಾಟಕ ಸರ್ಕಾರ, ಶಿಕ್ಷಣ ಕ್ಷೇತ್ರ ಮತ್ತು ಉದ್ಯಮದ ನಡುವಿನ ಬಲವಾದ ಮತ್ತು ಉದ್ದೇಶಪೂರ್ವಕ ಸಹಯೋಗದ ಮೇಲೆ ಅವಲಂಬಿಸಿದೆ.  ವೇಗವಾಗಿ ಬದಲಾಗುತ್ತಿರುವ ಜಾಗತಿಕ ಆರ್ಥಿಕತೆಯ ಅವಕಾಶಗಳಿಗೆ ಅನುಗುಣವಾಗಿ ಶಿಕ್ಷಣ ವ್ಯವಸ್ಥೆಯಿರಲು ಈ ಮೂರು ಸ್ತಂಭಗಳು ಏಕತೆಯಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.