ರಾಂಚಿ: ಸುಟ್ಟಗಾಯಗಳಿಂದ ಬಳಲುತ್ತಿದ್ದ ರೋಗಿಯನ್ನು ರಾಂಚಿಯಿಂದ ದೆಹಲಿಗೆ ಸಾಗಿಸುತ್ತಿದ್ದ ಏರ್ ಆಂಬುಲೆನ್ಸ್ ಅಫಘಾತಕ್ಕೀಡಾಗಿ ಅದರಲ್ಲಿದ್ದ ಇಬ್ಬರು ಪೈಲಟ್‌ಗಳು ಸೇರಿ ಏಳು ಮಂದಿ ಮೃತಪಟ್ಟಿರುವ ಘಟನೆ ಜಾರ್ಖಂಡ್ ನಲ್ಲಿ ವರದಿಯಾಗಿದೆ.
ರಾಜ್ಯದ ಛಾತ್ರಾ ಜಿಲ್ಲೆಯಲ್ಲಿ ಏರ್ ಆಂಬುಲೆನ್ಸ್ ಪತನಗೊಂಡಿದೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸದರ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ರೆಡ್‌ಬರ್ಡ್ ಏರ್‌ವೇಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ನಡೆಸುತ್ತಿದ್ದ ಬೀಚ್‌ಕ್ರಾಫ್ಟ್ ಸಿ90 ಏರ್ ಆಂಬುಲೆನ್ಸ್ ನಿನ್ನೆ ಸಂಜೆ ರಾಂಚಿಯಿಂದ ದೆಹಲಿಗೆ ತೆರಳುವಾಗ ಪತನಗೊಂಡಿದೆ. ವಿಮಾನದಲ್ಲಿದ್ದ ದಂತೆ ಎಲ್ಲಾ ಏಳು ಮಂದಿ ಮೃತಪಟ್ಟಿದ್ದಾರೆ.
ಮೂಲಗಳ ಪ್ರಕಾರ ವಿಮಾನವು ನಿನ್ನೆ ಸಂಜೆ 7.11ಕ್ಕೆ ರಾಂಚಿ ವಿಮಾನ ನಿಲ್ದಾಣದಿಂದ ಹೊರಟಿದ್ದು, 7.30ರ ವೇಳೆಗೆ ಏರ್ ಟ್ರಾಫಿಕ್ ಕಂಟ್ರೋಲ್ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿತ್ತು. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಆದರೆ ನಿಖರ ಕಾರಣವನ್ನು ಅಧಿಕೃತ ತನಿಖೆಯ ನಂತರವೇ ತಿಳಿದುಬರುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತರನ್ನು ಕ್ಯಾಪ್ಟನ್ ವಿವೇಕ್ ವಿಕಾಸ್ ಭಗತ್, ಕ್ಯಾಪ್ಟನ್ ಸವರಾಜ್‌ದೀಪ್ ಸಿಂಗ್, ಸಂಜಯ್ ಕುಮಾರ್, ಡಾ. ವಿಕಾಸ್ ಕುಮಾರ್ ಗುಪ್ತಾ, ಸಚಿನ್ ಕುಮಾರ್ ಮಿಶ್ರಾ, ಅರ್ಚನಾ ದೇವಿ ಮತ್ತು ಧುರು ಕುಮಾರ್ ಎಂದು ಗುರುತಿಸಲಾಗಿದೆ.
ಏರ್‌ಕ್ರಾಫ್ಟ್ ಅಪಘಾತ ತನಿಖಾ ಬ್ಯೂರೋ ತಂಡ ಈಗಾಗಲೇ ಸ್ಥಳಕ್ಕೆ ಆಗಮಿಸಿದ್ದು ತನಿಖೆ ಆರಂಭಿಸಿದೆ.