ಚೆನ್ನೈ: ತಮಿಳುನಾಡಿನಲ್ಲೂ ರೆಸಾರ್ಟ್ ರಾಜಕಾರಣ ಆರಂಭವಾಗಿದೆ. ಪಕ್ಷಾಂತರ ಮಾಡಬಹುದು ಎಎಂಬ ಭೀತಿಯಿಂದ ಎಐಎಡಿಎಂಕೆಯ 12ಕ್ಕೂ ಹೆಚ್ಚು ಶಾಸಕರನ್ನು ಪುದುಚೆರಿ ರೆಸಾರ್ಟ್‌ಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಫಲಿತಾಂಶ ಹೊರಬಿದ್ದ ನಂತರ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಟಿವಿಕೆ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದು ಎಐಎಡಿಎಂಕೆ ಪಕ್ಷದ ಕೆಲವು ಶಾಸಕರು ಒಲವು ತೋರಿಸಿರುವುದೇ ಪಕ್ಷಾಂತರ ಭೀತಿಗೆ ಕಾರಣ ಎನ್ನಲಾಗುತ್ತಿದೆ.
12ಕ್ಕೂ ಹೆಚ್ಚು ಎಐಎಡಿಎಂಕೆ ಶಾಸಕರು ಪುದುಚೇರಿಯ ರೆಸಾರ್ಟ್‌ನಲ್ಲಿ ಉಳಿದುಕೊಂಡಿರುವುದು ಖಚಿತವಾಗಿದೆ. ಟಿವಿಕೆ, ನಮ್ಮ ಶಾಸಕರನ್ನು ಖರೀದಿಸಬಹುದು ಎಂಬ ಭೀತಿಯಿಂದ ಅವರನ್ನು ರೆಸಾರ್ಟ್‌ಗೆ ಕರೆದೊಯ್ಯಲಾಗಿದೆ ಎಂದು ಎಐಎಡಿಎಂಕೆ ಹೇಳಿದೆ. ಟಿವಿಕೆಗೆ ಬೆಂಬಲ ನೀಡದಿರಲು ಪಕ್ಷ ನಿರ್ಧರಿಸಿದ್ದು ಎಲ್ಲಾ ಶಾಸಕರು ಇದಕ್ಕೆ ಒಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಿರಿಯ ನಾಯಕರಾದ ಸಿ.ವಿ. ಷಣ್ಮುಗಂ ಮತ್ತು ಕೆ.ಪಿ. ಮುನಿಸ್ವಾಮಿ ಅವರು ಟಿವಿಕೆಗೆ ನಾವು ಬೆಂಬಲ ಘೋಷಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಟಿವಿಕೆ ಪಕ್ಷವೂ ಇದುವರೆಗೆ ಬೆಂಬಲ ಕೋರಿಲ್ಲ ಎಂದು ಅವರು ಹೇಳಿದ್ದಾರೆ.
ಒಟ್ಟು 234 ಸ್ಥಾನಗಳಲ್ಲಿ ವಿಜಯ್ ನೇತೃತ್ವದ ಟಿವಿಕೆ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯ ದಾಖಲಿಸಿದೆ. ಆದರೆ ಬಹುಮತಕ್ಕೆ ಇನ್ನೂ 10 ಸ್ಥಾನಗಳ ಕೊರತೆ ಉಂಟಾಗಿದೆ. ಈಗಾಗಲೇ ಕಾಂಗ್ರೆಸ್ ತನ್ನ ಐವರು ಶಾಸಕರ ಷರತ್ತುಬದ್ಧ ಬೆಂಬಲ ಘೋಷಿಸಿದೆ. ಎಡಪಕ್ಷಗಳು (4 ಸ್ಥಾನ) ಮತ್ತು ವಿಸಿಕೆ (2 ಸ್ಥಾನ) ಬೆಂಬಲ ನೀಡುವ ಸಾಧ್ಯತೆಗಳಿವೆ.
ಎಐಎಡಿಎಂಕೆಯು ಬಿಜೆಪಿ ಜತೆ ಸಖ್ಯ ಹೊಂದಿದ್ದು, ಅದರ ಬೆಂಬಲ ಪಡೆಯಲು ವಿಜಯ್ ಹಿಂದೇಟು ಹಾಕುತ್ತಿದ್ದಾರೆ. ಬಿಜೆಪಿಯನ್ನು ತಮ್ಮ ಸೈದ್ಧಾಂತಿಕ ವಿರೋಧಿ ಎಂದು ವಿಜಯ್ ಈ ಹಿಂದೆಯೇ ಘೋಷಿಸಿದ್ದರು.