ಚೆನ್ನೈ: ಮಂಗಳವಾರ ಬೆಳಗ್ಗೆ ತಮಿಳುನಾಡಿದ ಸಮಾಜದಲ್ಲಿನ ದುರ್ಬಲ ವರ್ಗದ ಜನರ 37.79 ಲಕ್ಷ ಜನರಿಗೆ ಅಚ್ಚರಿಯ ಸಂದೇಶ ಬಂದಿತ್ತು. ತಮಿಳುನಾಡು ಸರ್ಕಾರ ಇವರೆಲ್ಲರ ಬ್ಯಾಂಕ್ ಖಾತೆಗಳಿಗೆ ತಲಾ ರೂ.2 ಸಾವಿರ ಜಮೆ ಮಾಡಿತ್ತು. ನಂತರ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಈ ವಿಷಯವನ್ನು ಎಕ್ಸ್ ನಲ್ಲಿ ಪ್ರಕಟಿಸಿದರು.
ವೃದ್ಧರು, ವಿಧವೆಯರು, ವಯಸ್ಸಾದ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಅಂಗವಿಕಲರಿಗೆ ಹೆಚ್ಚುವರಿ ಬೆಂಬಲ ನೀಡಬೇಕು ಎಂಬ ಮನವಿಗೆ, ಈಗಾಗಲೇ ಅವರು ಪಡೆಯುತ್ತಿರುವ ಮಾಸಾಶನ ಹೊರತುಪಡಿಸಿ, ಸರ್ಕಾರವು ಈ ವಿಶೇಷ ನೆರವು ನೀಡಿದೆ.
ಸರ್ಕಾರದ ಈ ಧನ ಸಹಾಯವು ದುರ್ಬಲ ವರ್ಗದ ಜನರ ಬದುಕಿಗೆ ಆಸರೆ ಆಗಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
29.29 ಲಕ್ಷ ಹಿರಿಯ ನಾಗರೀಕರು ಮತ್ತು ವಿಧವೆಯರು, 5.92 ಲಕ್ಷ ಅಂಗವಿಕಲರು ಮತ್ತು 2.58 ಲಕ್ಷ ಹೆಚ್ಚಿನ ಪ್ರಮಾಣದ ಅಂಗವೈಕಲ್ಯ ಹೊಂದಿರುವವರು ಈಗಾಗಲೇ ಪಡೆಯುತ್ತಿರುವ ಸಾಮಾಜಿಕ ಭದ್ರತೆಯ ಹಣದ ಜತೆ ಈ ರೂ.2 ಸಾವಿರ ಪಡೆದಿದ್ದಾರೆ. ಮೀನುಗಾರರ ಕುಟುಂಬಗಳು, ನೀಲಗಿರಿ ಜಿಲ್ಲೆಯ ಟೀ ಕಾರ್ಮಿಕರಿಗೂ ಸರ್ಕಾರ ನೆರವು ನೀಡಿದೆ.
ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸ್ಟಾಲಿನ್ ಸರ್ಕಾರ ಹೆಚ್ಚುವರಿ ಸಹಾಯ ಹಸ್ತ ಚಾಚಿದೆ.