2026-03-07 05:51:01

Actress rape case | ನಟಿ ಅತ್ಯಾಚಾರ ಪ್ರಕರಣ: ನಟ ದಿಲೀಪ್‌ ಖುಲಾಸೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಕೇರಳ ಸರ್ಕಾರ | Speed News Kannada

Actress rape case | ನಟಿ ಅತ್ಯಾಚಾರ ಪ್ರಕರಣ: ನಟ ದಿಲೀಪ್‌ ಖುಲಾಸೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಕೇರಳ ಸರ್ಕಾರ | Speed News Kannada

ತಿರುವನಂತಪುರ: ನಟಿಯೊಬ್ಬರ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಮಲಯಾಳಂ ಖ್ಯಾತ ನಟ ದಿಲೀಪ್ ಅವರನ್ನು ಆರೋಪಗಳಿಂದ ಮುಕ್ತಗೊಳಿಸಿದ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಕೇರಳ ಸರ್ಕಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಪ್ರಕರಣದ ಇತರೆ ಆರೋಪಿಗಳಾದ ಚಾರ್ಲಿ ಥಾಮಸ್, ಸನಿಲ್ ಕುಮಾರ್ ಯಾನೆ ಮೇಸ್ತ್ರಿ ಸನಿಲ್ ಮತ್ತು ಶರತ್ ಜಿ. ನಾಯರ್ ಅವರ ಖುಲಾಸೆಯನ್ನು ರಾಜ್ಯ ಸರ್ಕಾರ ಪ್ರಶ್ನಿಸಿದೆ.
ವಿಚಾರಣಾ ನ್ಯಾಯಾಲಯವು ಪ್ರಕರಣದ ಇತರ ಆರೋಪಿಗಳಾಗಿದ್ದ ಪಲ್ಸರ್ ಸುನಿ, ಮಾರ್ಟಿಂಗ್ ಆಂಟನಿ, ಬಿ. ಮಣಿಕಂದನ್, ವಿಪಿ ವಿಜೀಶ್, ಎಚ್. ಸಲೀಮ್, ಸಿ. ಪ್ರದೀಪ್  ಅವರನ್ನು ಅತ್ಯಾಚಾರ, ಪಿತೂರಿ, ಅಪಹರಣ ಮತ್ತು ಇತರ ಅಪರಾಧಗಳಲ್ಲಿ ತಪ್ಪಿತಸ್ಥರೆಂದು ಘೋಷಿಸಿದೆ.
ಇವರಿಗೆ  ಅಪರಾಧಕ್ಕಾಗಿ 20 ವರ್ಷಗಳ ಕಠಿಣ ಸಜೆ ವಿಧಿಸಲಾಗಿದೆ. ಆಪರಾಧಿಗಳಿಗೆ ವಿಧಿಸಲಾದ ದಂಡದ ಮೊತ್ತದಲ್ಲಿ 5 ಲಕ್ಷ ರೂ.ಗಳನ್ನು ಸಂತ್ರಸ್ತೆಗೆ ಪರಿಹಾರ ರೂಪದಲ್ಲಿ ನೀಡುವಂತೆ ನ್ಯಾಯಾಲಯವು ನಿರ್ದೇಶಿಸಿದೆ.
ದಿಲೀಪ್ ಅವರ ಮೇಲಿದ್ದ ಎಲ್ಲಾ ಆರೋಪಗಳನ್ನು ವಜಾಗೊಳಿಸಿದೆ ಮತ್ತು ಅಪರಾಧಿಗಳಿಗೆ ಆಶ್ರಯ ನೀಡಿದ್ದ ಆರೋಪದಿಂದ ಚಾರ್ಲಿ ಥಾಮಸ್ ಅವರನ್ನು ಖುಲಾಸೆಗೊಳಿಸಿದೆ. 
ರಾಜ್ಯ ಸರ್ಕಾರವು ತನ್ನ ಮೇಲ್ಮನವಿಯಲ್ಲಿ, ಆರೋಪಿಗಳ ಖುಲಾಸೆಯು ಕಾನೂನುಬಾಹಿರ ಮತ್ತು ಅಸಮರ್ಥನೀಯ ಎಂದು ವಾದಿಸಿದೆ. ವಿಚಾರಣಾ ನ್ಯಾಯಾಲಯವು ತನಿಖಾ ತಂಡದ ವಿರುದ್ಧ ನೀಡಿರುವ ಕೆಲವು ಪ್ರತಿಕೂಲ ಅಭಿಪ್ರಾಯಗಳನ್ನು ಕುರಿತು ರಾಜ್ಯ ಸರ್ಕಾರ ತನ್ನ ಮೇಲ್ಮನವಿಯಲ್ಲಿ ಪ್ರಶ್ನಿಸಿದೆ. ವಿಶೇಷ ತನಿಖಾ ತಂಡವು (ಎಸ್‌ಐಟಿ) ಅತ್ಯಂತ ಸಮಗ್ರವಾದ ಮತ್ತು ನ್ಯಾಯಸಮ್ಮತವಾದ ತನಿಖೆಯನ್ನು ನಡೆಸಿದೆ ಎಂದು ಸರ್ಕಾರ ಪ್ರತಿಪಾದಿಸಿದೆ. ತನಿಖೆಯಲ್ಲಿ ಒಂದು ವೇಳೆ ಸಣ್ಣಪುಟ್ಟ ನ್ಯೂನತೆಗಳಿದ್ದರೂ ಅವುಗಳ ಆಧಾರದಲ್ಲಿ ಆರೋಪಿಗಳಿಗೆ ಅನ್ಯಾಯವಾಗಿದೆ ಎಂದು ಸಾಬೀತಾಗದ ಹೊರತು, ಅಂತಹ ನ್ಯೂನತೆಗಳನ್ನೇ ಖುಲಾಸೆಗೆ ಆಧಾರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಪ್ರತಿಪಾದಿಸಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.