ಬೆಂಗಳೂರು: ಮಧ್ಯಾಹ್ನದ ಊಟಕ್ಕೆ ತೆರಳುತ್ತಿದ್ದ ಮಹಿಳಾ ಉದ್ಯೋಗಿಯೊಬ್ಬರು ರಸ್ತೆ ದಾಟುವಾಗ ಬೈಕ್ ಡಿಕ್ಕಿಯಾಗಿ ಅಸುನೀಗಿರುವ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ. ಹೆಚ್ ಡಿ ಎಫ್ ಸಿ ಬ್ಯಾಂಕ್ ಉದ್ಯೋಗಿ 27 ವರ್ಷದ ಯೋಗೇಶ್ವರಿ ಮೃತ ಯುವತಿ.
ಯೋಗೇಶ್ವರಿ ಅವರು ರಾಜಾಜಿನಗರದಲ್ಲಿ ಕಚೇರಿಯಿಂದ ಊಟಕ್ಕೆ ರಸ್ತೆ ದಾಟುತ್ತಿದ್ದರು. ಆಗ ವೇಗವಾಗಿ ಬಂದ ಬುಲೆಟ್ ಇವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಯೋಗೇಶ್ವರಿ ಅವರಿಗೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಅವರನ್ನು ಸಮೀಪದ ಸುಗುಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ತೀವ್ರ ರಕ್ತಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೇ ಯೋಗೇಶ್ವರಿ ಮೃತಪಟ್ಟಿದ್ದಾರೆ. ರಾಜಾಜಿನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬೈಕ್ ಬರುವುದರೊಳಗೆ ರಸ್ತೆ ದಾಟಬಹುದು ಎಂಬ ಉಮೇದಿನಿಂದ ಯೋಗೇಶ್ವರಿ ರಸ್ತೆ ದಾಟಿದ್ದರು. ಆದರೆ ಅವರ ಜತೆ ಇದ್ದ ಮತ್ತೊಬ್ಬ ಉದ್ಯೋಗಿ ರಸ್ತೆ ದಾಟಿರಲಿಲ್ಲ. ಬೈಕ್ ಸವಾರ ದೀಪನ್ ಗೂ ಗಾಯಗಳಾಗಿದ್ದು ಅವರನ್ನು ಕಮಾಂಡೋ ಆಸ್ಪತ್ರೆಗೆ ದಾಖಲಿಸಲಾಗಿದೆ.