ಬೆಂಗಳೂರು: ಸಣ್ಣ ವಾಗ್ವಾದವೊಂದು ಭೀಕರ ಹತ್ಯೆಗೆ ಕಾರಣವಾಗಿದೆ. ಬೆಂಗಳೂರಿನ ಬಸವೇಶ್ವರ ನಗರದ ತಿಮ್ಮಯ್ಯ ರಸ್ತೆಯಲ್ಲಿರುವ ಶ್ರೀಗುರು ರಾಘವೇಂದ್ರ ದೋಸೆ ಕ್ಯಾಂಪ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ರಾತ್ರಿ ಸುಮಾರು 10 ಗಂಟೆಗೆ ಊಟಕ್ಕೆ ಬಂದಿದ್ದ ಲೋನ್ ರಿಕವರಿ ಏಜೆಂಟ್ ಶಶಿಕುಮಾರ್ , ಊಟ ಮುಗಿಸಿ ಹೊರಬರುವಾಗ ಅಜಾಗರೂಕತೆಯಿಂದ ಮಂಜುನಾಥ್‌ಗೆ ಕಾಲು ತಗುಲಿತ್ತು.
ಈ ಸಣ್ಣ ಘಟನೆ ಜಗಳಕ್ಕೆ ತಿರುಗಿ, ಹೋಟೆಲ್ ಮಾಲೀಕರು ಮಧ್ಯಸ್ಥಿಕೆ ವಹಿಸಿ ಇಬ್ಬರನ್ನೂ ಬೇರ್ಪಡಿಸಿದ್ದರು. ಆದರೆ ಕೋಪ ತಣ್ಣಗಾಗದ ಮಂಜುನಾಥ್ ತನ್ನ ಸಹೋದರ ಭವ್ಯರಾಜ್‌ಗೆ ಕರೆ ಮಾಡಿ ಶಸ್ತ್ರಾಸ್ತ್ರದೊಂದಿಗೆ ಬರಲು ಹೇಳಿದ್ದಾನೆ. ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕಾಗಮಿಸಿದ ಅಣ್ಣ-ತಮ್ಮಂದಿರು ಶಶಿಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ವೇಳೆ ತೀವ್ರವಾಗಿ ಇರಿತಕ್ಕೊಳಗಾದ ಶಶಿಕುಮಾರ್ ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲ್ಪಟ್ಟರೂ ಪ್ರಾಣ ಬದುಕುಳಿಯಲಿಲ್ಲ. ಈ ಘಟನೆ ಸಂಬಂಧ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಇನ್ನು ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಯತೀಶ್ ತಿಳಿಸಿದ್ದಾರೆ.