2026-06-25 04:01:43

A mentally ill woman spent 10 days with her husbands dead body|ಪತಿ ಮೃತದೇಹದ ಜೊತೆ 10 ದಿನ ಕಳೆದ ಮಾನಸಿಕ ಅಸ್ವಸ್ಥ ಮಹಿಳೆ|Speed News Kannada

A mentally ill woman spent 10 days with her husbands dead body|ಪತಿ ಮೃತದೇಹದ ಜೊತೆ 10 ದಿನ ಕಳೆದ ಮಾನಸಿಕ ಅಸ್ವಸ್ಥ ಮಹಿಳೆ|Speed News Kannada

ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ಗ್ರಾಮದಲ್ಲಿ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ಮಾನಸಿಕ ಅಸ್ವಸ್ಥ ಪತ್ನಿಯೊಬ್ಬರು ಮೃತಪಟ್ಟ ಪತಿಯ ಶವದೊಂದಿಗೆ ಹತ್ತು ದಿನಗಳ ಕಾಲ ಕಳೆದಿದ್ದಾರೆ. ಸುಮಾರು 77 ವರ್ಷದ ಸಿರಿಲ್ ಮೋನಿಸ್ ಎಂಬುವವರು ಅನಾರೋಗ್ಯದಿಂದ ಮಲಗಿದ್ದಲ್ಲೇ ಸಾವನ್ನಪ್ಪಿದ್ದರು. ಆದರೆ ಅವರ ಪತ್ನಿ ಮಾನಸಿಕ ಅಸ್ವಸ್ಥತೆಯಿಂದಾಗಿ ಪತಿ ಸಾವನ್ನಪ್ಪಿರುವುದು ತಿಳಿಯದೆ, ಸಂಪೂರ್ಣವಾಗಿ ಕೊಳೆತು ಹುಳ ಹಿಡಿದಿದ್ದ ಮೃತದೇಹದ ಜೊತೆಯಲ್ಲೇ ವಾಸವಿದ್ದರು. ಮನೆಯಿಂದ ಅಸಹನೀಯ ವಾಸನೆ ಬಂದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಈ ವಿಚಾರ ಬೆಳಕಿಗೆ ಬಂದಿದೆ.

ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಆಕೆ "ನನ್ನ ಗಂಡ ನನಗೆ ಬೇಕು, ಅವರನ್ನು ಕರೆದೊಯ್ಯಬೇಡಿ" ಎಂದು ಶವವನ್ನು ಅಪ್ಪಿಕೊಂಡು ರೋದಿಸಿದ್ದು ನೆರೆದಿದ್ದವರ ಕಣ್ಣನ್ನು ತೇವಗೊಳಿಸಿತ್ತು. ಮೃತ ದಂಪತಿಯ ಮಗ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಮಗಳು ದುಬೈನಲ್ಲಿ ಶಿಕ್ಷಕಿಯಾಗಿದ್ದಾರೆ. ಮಗ ಪ್ರತಿದಿನ ಫೋನ್ ಮಾಡಿ ವಿಚಾರಿಸಿದಾಗಲೆಲ್ಲಾ ತಾಯಿ "ಅಪ್ಪ ಚೆನ್ನಾಗಿದ್ದಾರೆ" ಎಂದೇ ಉತ್ತರಿಸುತ್ತಿದ್ದರು. ಇತ್ತೀಚೆಗಷ್ಟೇ ತಂದೆಯನ್ನು ಆಸ್ಪತ್ರೆಗೆ ತೋರಿಸಿ ಹೋಗಿದ್ದ ಮಗನಿಗೆ ತಂದೆಯ ಸಾವಿನ ಸುಳಿವೇ ಇರಲಿಲ್ಲ. ಮನೆಯ ಪರಿಸ್ಥಿತಿ ಎಷ್ಟು ಭೀಕರವಾಗಿತ್ತೆಂದರೆ, ಮೃತದೇಹ ಕೊಳೆತು ನಾರುತ್ತಿದ್ದ ಕಾರಣ ಸ್ಥಳೀಯರು ಹತ್ತಿರ ಹೋಗಲು ಹಿಂದೇಟು ಹಾಕುತ್ತಿದ್ದರು.

ಕೊನೆಗೆ ಸಮಾಜ ಸೇವಕ ಆರೀಫ್ ಅವರ ನೆರವಿನಿಂದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿ, ಬಣಕಲ್ ಕ್ರೈಸ್ತ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ತಂದೆಯ ಸಾವಿನ ಸುದ್ದಿ ಕೇಳಿ ಸಂಜೆ ವೇಳೆಗೆ ಊರಿಗೆ ಬಂದ ಮಗನಿಗೆ ತಂದೆಯ ಅಂತಿಮ ದರ್ಶನ ಪಡೆಯುವ ಭಾಗ್ಯವೂ ಸಿಗಲಿಲ್ಲ, ಇತ್ತ ಮಗಳು ವಿದೇಶದಿಂದ ಬರಲಾಗದ ಅಸಹಾಯಕ ಸ್ಥಿತಿಯಲ್ಲಿದ್ದರು. ಪತಿಯ ಸಾವಿನ ಅರಿವಿಲ್ಲದ ಮಾನಸಿಕ ಅಸ್ವಸ್ಥ ತಾಯಿ ಮತ್ತು ಅಂತ್ಯಕಾಲದಲ್ಲಿ ಪಕ್ಕದಲ್ಲಿಲ್ಲದ ಮಕ್ಕಳ ಸ್ಥಿತಿ ಕಂಡು ಇಡೀ ಗ್ರಾಮವೇ ಕಂಬನಿ ಮಿಡಿಯಿತು.

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.