2026-03-14 02:40:14

A man who went to a party was found dead | ಪಾರ್ಟಿಗೆಂದು ಹೋದವ ಸಿಕ್ಕಿದ್ದು ಶವವಾಗಿ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ಯಾರು | Speed News Kannada

A man who went to a party was found dead | ಪಾರ್ಟಿಗೆಂದು ಹೋದವ ಸಿಕ್ಕಿದ್ದು ಶವವಾಗಿ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ಯಾರು | Speed News Kannada

ಚಾಮರಾಜನಗರ, ಮಾರ್ಚ್ 13: ಗೆಳೆಯನ ಜೊತೆ ಬೈಕ್ ಏರಿ ಪಾರ್ಟಿಗೆ ಹೋಗಿದ್ದ ವ್ಯಕ್ತಿಯೋರ್ವ ಬರ್ಬರವಾಗಿ ಕೊಲೆಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣಕ್ಕೆ ಹೊಂದಿಕೊಂಡಂತಿರುವ ದೊಡ್ಡಕೆರೆ ಏರಿ ಬಳಿ ನಡೆದಿದೆ.. ಗುಂಡ್ಲುಪೇಟೆಯ ಮೂಖಹಳ್ಳಿ ಗ್ರಾಮದ ನಂಜುಂಡಸ್ವಾಮಿ (23) ಮೃತ ವ್ಯಕ್ತಿಯಾಗಿದ್ದು, ಕತ್ತು ಕೊಯ್ದು ಹತ್ಯೆ ಮಾಡಿರುವ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ.
ಅಜಯ್ ಎಂಬಾತ ನಂಜುಂಡಸ್ವಾಮಿಯನ್ನು ಪಾರ್ಟಿಗೆಂದು ಕರೆದೊಯ್ದಿದ್ದ ಎನ್ನಲಾಗಿದ್ದು, ಅಲ್ಲಿ ನಡೆದಿದ್ದಾರೂ ಏನು ಎಂಬ ಪ್ರಶ್ನೆ ಈಗ ಉದ್ಭವಿಸಿದೆ.
ನಂಜುಂಡಸ್ವಾಮಿ ಬೆಂಗಳೂರು, ನಂಜನಗೂಡು ಹೀಗೆ ಹಲವೆಡೆ ಸಣ್ಣಪುಟ್ಟ ಕೂಲಿ, ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದ. ಕೆಲಸ ಮುಗಿಸಿ ಮನೆಗೆ ಬಂದಿದ್ದ ನಂಜುಂಡಸ್ವಾಮಿಯನ್ನು ಬಲವಂತದಿಂದ ಪಾರ್ಟಿ ಮಾಡೋಣ ಬಾ ಎಂದು ಕರೆದೊಯ್ದಿದ್ದ ಅಜಯ್ ಎಂಬಾತ ಸದ್ಯ ತಲೆ ಮರೆಸಿಕೊಂಡಿದ್ದಾನೆ. ಅಷ್ಟಕ್ಕೂ ಪಾರ್ಟಿಯಲ್ಲಿ ಏನಾಯಿತು? ಇಬ್ಬರೇ ಪಾರ್ಟಿ ಮಾಡಿದ್ದರಾ ಅಥವಾ ಜೊತೆಗೆ ಇನ್ನಷ್ಟು ಮಂದಿ ಇದ್ದರೇ ಎಂಬುದು ಇನ್ನೂ ನಿಗೂಢವಾಗಿದೆ. ಗಾಂಜಾ ಮತ್ತು ಅಥವಾ ಮದ್ಯದ ನಶೆಯಲ್ಲಿ ಈ ಕೊಲೆ ನಡೆದಿರಬಹುದು ಎಂಬ ಗುಮಾನಿ ಇದೆ. ಹೀಗಾಗಿ ಎಲ್ಲ ಆಯಾಮಗಳಲ್ಲಿಯೂ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಇನ್ನು ಮರಣೋತ್ತರ ಪರೀಕ್ಷೆ ಬಳಿಕ ಯುವಕನ ಶವವನ್ನು ವಾರಸುದಾರರಿಗೆ ಹಸ್ತಾಂತರ ಮಾಡಲಾಗಿದೆ. ಸದ್ಯ, ನಂಜುಂಡಸ್ವಾಮಿ ಸಹೋದರ ರಾಜು ನೀಡಿರುವ ದೂರಿನ ಅನ್ವಯ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರ ತಂಡ ರಚಿಸಲಾಗಿದೆ. ನಂಜುಂಡಸ್ವಾಮಿಯನ್ನು ಪಾರ್ಟಿಗೆ ಕರೆದೊಯ್ದಿದ್ದ ಅಜಯ್ ಸಿಕ್ಕ ಬಳಿಕವೇ ಘಟನೆ ಸಂಪೂರ್ಣ ಸತ್ಯ ಬಯಲಾಗಬೇಕಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮತ್ತೊಂದೆಡೆ ತನ್ನ ಮಗನ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ಆಗಬೇಕೆಂದು ಮೃತನ ತಂದೆ ಕರಿಯಯ್ಯ ಮತ್ತು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.