ದಾವಣಗೆರೆ: ಇತ್ತೀಚೆಗೆ ಕಿರಿಯ ವಯಸ್ಸಿನವರಿಗೆ ಹೃದಯಾಘಾತ ಸಂಭವಿಸುವ ಪ್ರಕರಣಗಳು ಆತಂಕ ಮೂಡಿಸುತ್ತಿವೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗೋಗುದ್ದು ಗ್ರಾಮದಲ್ಲಿ 15 ವರ್ಷದ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಗೋಗುದ್ದು ಗ್ರಾಮದ ಚಮನ್‌ಸಾಬ್ ಮತ್ತು ಫಾತಿಮಾ ದಂಪತಿಯ ಪುತ್ರ ಮುಜಾಮಿಲ್ (15) ಮೃತ ಬಾಲಕ. ಈತ ರಾಜೀವ್ ಗಾಂಧಿ ವಸತಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ.
ಶಾಲೆಗೆ ರಜೆ ಹಿನ್ನೆಲೆ ಮನೆಗೆ ಬಂದಿದ್ದ ಮುಜಾಮಿಲ್ ಇಂದು ಮುಂಜಾನೆ ಬಹಿರ್ದೆಸೆಗೆ ತೆರಳಿದ್ದ ವೇಳೆ ಅಸ್ವಸ್ಥನಾಗಿ ಕುಸಿದುಬಿದ್ದಿದ್ದಾನೆ. ವಿಷಯ ತಿಳಿದ ಕುಟುಂಬಸ್ಥರು ತಕ್ಷಣವೇ ಸಮೀಪದ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರೂ, ಮಾರ್ಗ ಮಧ್ಯೆಯೇ ಬಾಲಕ ಅಸುನೀಗಿದ್ದಾನೆ. ಹೃದಯಾಘಾತವೇ ಸಾವಿಗೆ ಕಾರಣ ಎಂದು ತಿಳಿದು ಬಂದಿದೆ.
ಗ್ರಾಮದಲ್ಲಿ ದುಃಖದ ವಾತಾವರಣ ಮೂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಕಳೆದ ವರ್ಷ ಹಾಸನ ಜಿಲ್ಲೆಯೊಂದರಲ್ಲೇ ಒಂದೂವರೆ ತಿಂಗಳ ಅವಧಿಯಲ್ಲಿ ಸುಮಾರು 26 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಕಳೆದ ತಿಂಗಳು ಜನವರಿಯಲ್ಲಿ ಚಾಮರಾಜನಗರದಲ್ಲಿ 8 ವರ್ಷದ ಬಾಲಕಿ ಶಾಲೆಯಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಳು.