ವಾಷಿಂಗ್ಟನ್: ಕುವೈತ್‌ನ 'ಟ್ಯಾಕ್ಟಿಕಲ್ ಆಪರೇಷನ್ ಸೆಂಟರ್' ಮೇಲೆ ಇರಾನ್ ನಡೆಸಿದ ಡ್ರೋನ್ ದಾಳಿಯಲ್ಲಿ ಅಮೆರಿಕದ ಆರು ಸೈನಿಕರು ಮೃತಪಟ್ಟಿದ್ದಾರೆ. ಅಮೆರಿಕವೂ ಈ ವಿಷಯವನ್ನು ಖಚಿತಪಡಿಸಿದೆ. ಈ ಮಧ್ಯೆ ಅಮೆರಿಕ ಸೇನೆಯ ಸುರಕ್ಷತಾ ಮುನ್ನೆಚ್ಚರಿಕೆಗಳ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.
ಟ್ಯಾಕ್ಟಿಕಲ್ ಆಪರೇಷನ್ ಸೆಂಟರ್' ಶುಐಬಾ ಬಂದರಿನ ಕೇಂದ್ರಭಾಗದಲ್ಲಿದ್ದು, ಅಮೆರಿಕದ ಮುಖ್ಯ ಸೇನಾ ನೆಲೆ 'ಕ್ಯಾಂಪ್ ಅರಿಫ್ಜಾನ್'ನಿಂದ ಹಲವು ಮೈಲಿ ದೂರದಲ್ಲಿದೆ ಎಂದು ವರದಿಯಾಗಿದೆ.
ಇಸ್ರೇಲ್ -ಅಮೆರಿಕ ಜೋಡಿ ಇರಾನ್ ಮೇಲೆ ದಾಳಿ ಆರಂಭಿಸಿದ ನಂತರ ಕುವೈತ್, ಬಹ್ರೇನ್, ಯುಎಇ ಮತ್ತು ಸೌದಿ ಅರೇಬಿಯಾದಲ್ಲಿ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿ ಇರಾನ್ ಪ್ರತಿದಾಳಿ ನಡೆಸುತ್ತಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಸಾವು-ನೋವುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ವೈಮಾನಿಕ ರಕ್ಷಣಾ ವ್ಯವಸ್ಥೆಯನ್ನು ಭೇದಿಸಿ ಬಂದ ಕ್ಷಿಪಣಿಯಿಂದ ‘ಟ್ಯಾಕ್ಟಿಕಲ್ ಆಪರೇಷನ್ ಸೆಂಟರ್‌ನಲ್ಲಿದ್ದ ಆರು ಸೈನಿಕರು ಹತರಾಗಿದ್ದಾರೆ’ ಎಂದು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ತಿಳಿಸಿದ್ದಾರೆ.