2026-06-25 04:12:58

ನಕಲಿ ದಾಖಲೆ ಸೃಷ್ಟಿಸಿ ರೂ.23.35 ಕೋಟಿ ಲೂಟಿ; ಸ್ಲಂ ಬೋರ್ಡ್ ಅಧಿಕಾರಿಗಳ ಮನೆ ಮೇಲೆ ದಾಳಿ |Speed News Kannada

ನಕಲಿ ದಾಖಲೆ ಸೃಷ್ಟಿಸಿ ರೂ.23.35 ಕೋಟಿ ಲೂಟಿ; ಸ್ಲಂ ಬೋರ್ಡ್ ಅಧಿಕಾರಿಗಳ ಮನೆ ಮೇಲೆ ದಾಳಿ |Speed News Kannada

ಬೆಳಗಾವಿ: ಜಿಲ್ಲೆಯ ರಾಮದುರ್ಗ ಪಟ್ಟಣದ ಕೊಳೆಗೇರಿಯಲ್ಲಿ 600 ಮನೆಗಳನ್ನು ನಿರ್ಮಿಸಲಾಗಿದೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ರೂ.23.35 ಕೋಟಿ ಹಣವನ್ನು ಲಪಟಾಯಿಸಿದ ಆರೋಪದಡಿಯಲ್ಲಿ ರಾಮದುರ್ಗ ಇಲ್ಲಿನ ಕೊಳೆಗೇರಿ ಅಭಿವೃದ್ಧಿ ಮಂಡಳಿ ಕಚೇರಿ ಮತ್ತು ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.

ಈ ಸಂಬಂಧ ಲೋಕಾಯುಕ್ತ ಪಿಎಸ್‌ಐ ಪ್ರಸನ್ನ ದೇಸಾಯಿ ದೂರು ದಾಖಲಿಸಿದ್ದರು. ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ನಿವೃತ್ತ) ಬಿ.ಎಸ್. ಶಂಭುಲಿಂಗಪ್ಪ ಮತ್ತು ಗುತ್ತಿಗೆದಾರ ಎನ್‌.ಪಿ.ಪ್ರಸಾದ್‌ ಮತ್ತು ಅಕ್ರಮದಲ್ಲಿ ಭಾಗಿಯಾಗಿದ್ದ ಇತರರ ನಿವಾಸಗಳಲ್ಲಿ ದಾಳಿ ನಡೆದಿದೆ.

ಬೆಳಗಾವಿಯ ಹಿಂಡಲಗಾದ ಕೊಳೆಗೇರಿ ಅಭಿವೃದ್ಧಿ ಮಂಡಳಿ ಕಚೇರಿ, ಹುಬ್ಬಳ್ಳಿಯ ವಿದ್ಯಾನಗರದ ಶಿರೂರ ಪಾರ್ಕ್‌ನಲ್ಲಿರುವ ಶಂಭುಲಿಂಗಪ್ಪ ಅವರ ಮನೆ, ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ನ್ಯಾಷನಲ್ ಪ್ರಾಜೆಕ್ಟ್ ಕನ್‍ಸ್ಟ್ರಕ್ಷನ್ ಕಾರ್ಪೊರೇಶನ್ ಲಿಮಿಟೆಡ್‌ ಕಚೇರಿ, ವಿಜಯಪುರದ ಗಿರಿಮಲ್ಲಪ್ಪ ಜೋಗೂರ ಅವರ ಮನೆ, ಬಾಗಲಕೋಟೆ ಜಿಲ್ಲೆಯ ಮುಧೋಳದ ಕಿರಣ ಹೊಸಕೋಟಿ ಅವರ ಮನೆ, ಬೆಲ್‌ಕೆರೂರಿನ ರಿಂದನಗೌಡ ಶೇಖರಗೌಡ ಪಾಟೀಲ ಮನೆ ಮೇಲೂ ಏಕಕಾಲಕ್ಕೆ ದಾಳಿ ನಡೆದಿದೆ.

ಇನ್‌ಸ್ಪೆಕ್ಟರ್‌ ಎಸ್.ಎಚ್. ಹೊಸಮನಿ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ. ದಾಳಿ ವೇಳೆ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಲೋಕಾಯುಕ್ತ ಎಸ್‌ ಪಿ ಹಣಮಂತರಾಯ ತಿಳಿಸಿದರು.

ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಸರ್ವರಿಗೂ ಸೂರು (ನಗರ)–2022 ಕಾರ್ಯಕ್ರಮದಡಿ 600 ಮನೆ ನಿರ್ಮಿಸಲಾಗಿದೆ ಎಂದು ದಾಖಲೆ ಸೃಷ್ಟಿಸಿ ಅನುದಾನ ‍ಪಡೆಯಲಾಗಿದೆ. ಈ ಕೃತ್ಯದಲ್ಲಿ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ಮತ್ತು ಗುತ್ತಿಗೆದಾರ  ಭಾಗಿಯಾಗಿರುವ ಆರೋಪ ಕೇಳಿ ಬಂದಿತ್ತು.

ಯಾವುದೇ ಕಾಮಗಾರಿ ನಡೆಸಿಲ್ಲ. ಜಿಪಿಎಸ್‌ ಇಲ್ಲದೆ ಕಾಮಗಾರಿ ಮುಗಿಸಲಾಗಿದೆ ಎಂದು ಹಣ ಮಂಜೂರು ಮಾಡಿಸಿಕೊಂಡಿದ್ದರು. ನಂತರ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಬೆಳಗಾವಿಯ ವಿಭಾಗ ಮತ್ತು ಉಪವಿಭಾಗದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ ಯಾವುದೇ ಮನೆ ಕಟ್ಟದಿರುವುದು ಬೆಳಕಿಗೆ ಬಂದಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.