ಬೆಂಗಳೂರು: ನಿರ್ದೇಶಕ ಅನಿಶ್ ಅವರನ್ನು ಅಪಹರಿಸಿ ಚಿನ್ನಾಭರಣ ದೋಚಿದ್ದ ಪ್ರಕರಣದಲ್ಲಿ ಭೀಮಾ ಸಿನಿಮಾ ನಟಿ ಸೇರಿದಂತೆ 11 ಮಂದಿಯನ್ನು ಬಂಧಿಸಲಾಗಿದೆ. ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ನಟಿ ಐಶ್ವರ್ಯಾ ಸೇರಿದಂತೆ 11 ಮಂದಿಯನ್ನು ಬಂಧಿಸಲಾಗಿದೆ. ಕೆಲ ಶಾರ್ಟ್ ಫಿಲ್ಡ್ ಮಾಡಿದ್ದ ನಿರ್ದೇಶಕ ಅನಿಶ್ ಇತ್ತೀಚೆಗೆ 'ಜೀವನದ ಭಾಷೆ' ಎನ್ನುವ ಹೊಸ ಸಿನಿಮಾ ಶೂಟಿಣಂಗ್ ಆರಂಭಿಸಿದ್ದರು. ಕಾರಣಾಂತರಗಳಿಂದ ಸಿನಿಮಾ ನಿಲ್ಲಿಸಿ ಬೆಂಗಳೂರಿನಿಂದ ಮುಂಬೈಗೆ ಶಿಫ್ಟ್ ಆಗಿದ್ದರು. ಭೀಮಾ ಚಿತ್ರದಲ್ಲಿ ನಟಿಸಿದ್ದ ನಟಿ ಐಶ್ವರ್ಯಾ ಸಂಪರ್ಕಿಸಿದ್ದ ಅನಿಶ್ ಕಾರು ಮಾರಾಟದ ಬಗ್ಗೆ ವಿಚಾರ ತಿಳಿಸಿದ್ದರು. ನಟಿಯ ಮೂಲಕ ಮಾಹಿತಿ ಕಲೆ ಹಾಕಿದ್ದ ಆರೋಪಿಗಳು, ಕಾರು ಖರೀದಿ ನೆಪದಲ್ಲಿ ಹಣ ದೋಚಲು ಸಂಚು ರೂಪಿಸಿದ್ದರು.
ನಟಿಯ ಮೂಲಕ ನಿರ್ದೇಶಕರನ್ನು ಆಡುಗೋಡಿ ಠಾಣಾ ವ್ಯಾಪ್ತಿಯ ಪ್ರದೇಶವೊಂದಕ್ಕೆ ಕರೆಸಿಕೊಂಡು ಅಪಹರಿಸಿ ಬ್ಯಾರಹಳ್ಳಿ ಮನೆಯೊಂದರಲ್ಲಿ ಇರಿಸಿದ್ದರು. ಕ್ರಿಕೆಟ್ ಸ್ಟಂಪ್, ಹಾಕಿ ಸ್ಟಿಕ್‌ನಿಂದಲೂ ಹಲ್ಲೆ ನಡೆಸಿ ಬಳಿಕ ಚಿನ್ನಾಭರಣ ದೋಚಿಕೊಂಡು, ತುಮಕೂರಿನ ಮಧುಗಿರಿ ಬಳಿ ಬಿಟ್ಟು ಕಳುಹಿಸಿದ್ದರು.
ಈ ಸಂಬಂಧ ನಿರ್ದೇಶಕ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಆಡುಗೋಡಿ ಠಾಣೆಯ ಪೊಲೀಸರು, 11 ಜನರನ್ನ ಬಂಧಿಸಿದ್ದಾರೆ. ಪರಿಚಯಸ್ಥರಿಂದಲೇ ಕಿಡ್ನಾಪ್ ಪ್ಲಾನ್
'ಜೀವನದ ಭಾಷೆ' ಎಂಬ ಸಿನಿಮಾ ನಿರ್ದೇಶನ ಮಾಡುತ್ತಿದ್ದ ಅನೀಶ್ ಈ ಮುಂಚೆ 'ಭರವಸೆಯ ಜೀವನ' ಎಂಬ ಶಾರ್ಟ್ ಮೂವಿ ಮಾಡಿದ್ದರು. ನಂತರ ಜೀವನದ ಭಾಷೆ ಎಂಬ ಸಿನಿಮಾ ಮಾಡುತ್ತಿದ್ದರು. ಭೀಮಾ ಸಿನಿಮಾ ನಟಿ ಐಶ್ವರ್ಯಾ ಮೂಲಕ ನಿರ್ದೇಶಕನ ಸಂಪರ್ಕ ಮಾಡಲಾಗಿತ್ತು. ದುನಿಯಾ ವಿಜಯ್ ಅಭಿನಯದ ಭೀಮಾ ಸಿನಿಮಾದಲ್ಲಿ ನಟಿಸಿದ್ದ ಐಶ್ವರ್ಯಾ ಕಾರು ಖರೀದಿ ಮಾಡ್ತೀವಿ ಎಂದು ಕರೆ ಮಾಡಿ ಕಿಡ್ನಾಪ್ ಮಾಡಿದ್ರು. ಪರಿಚಯಸ್ಥನಿಂದಲೇ ಕಿಡ್ನಾಪ್ ಪ್ಲಾನ್ ಮಾಡಿರೋದು ನಂತರ ಬೆಳಕಿಗೆ ಬಂದಿದೆ. ಪ್ರಮುಖ ಆರೋಪಿ ಆಶೀರ್ವಾದ್ ಎಂಬಾತನನ್ನೇ ಪಕ್ಕಾ ಸ್ಕ್ಯಾನ್ ಮಾಡಿದ್ದರು ಎನ್ನಲಾಗಿದೆ.
5 ಲಕ್ಷ ಹಣದ ವಿಚಾರಕ್ಕೆ ಆಶೀರ್ವಾದ್ ಮತ್ತು ನಿರ್ದೇಶಕನ ನಡುವೆ ಗಲಾಟೆ ನಡೆದಿತ್ತು. ಇದೇ ವಿಚಾರಕ್ಕೆ ಅಪಹರಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ನಟಿ ಐಶ್ವರ್ಯಾ ಸೇರಿ ಹನ್ನೊಂದು ಜನ ಆರೋಪಿಗಳನ್ನ ಬಂಧಿಸಲಾಗಿದ್ದು, ಆಡುಗೋಡಿ ಪೊಲೀಸರಿಂದ ತನಿಖೆ ಮುಂದುವರಿದಿದೆ.