ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಕಳೆದ ಎರಡು-ಮೂರು ದಿನಗಳಿಂದ ವಿಚಿತ್ರ ಹಾಗೂ ವಿಕೃತ ಘಟನೆಯೊಂದು ಬೆಳಕಿಗೆ ಬಂದಿದ್ದು, ವ್ಯಕ್ತಿಯೋರ್ವ ತಡರಾತ್ರಿ ಮನೆಯ ಕಾಂಪೌಂಡ್ ಹಾರಿ ಮಹಿಳೆಯರ ಒಳ ಉಡುಪು ಕಳ್ಳತನ ಮಾಡುವ ಘಟನೆ ನಡೆದಿದೆ. ರಾತ್ರಿಯ ವೇಳೆ ಮನೆಗಳ ಕಂಪೌಂಡ್ ಹಾರಿ ಬರುವ ವ್ಯಕ್ತಿಯೊಬ್ಬ, ಮನೆಯ ಹೊರಗೆ ಒಣಹಾಕಿರುವ ಮಹಿಳೆಯರ ಒಳ ಉಡುಪುಗಳನ್ನು ಕದ್ದು ಪರಾರಿಯಾಗುತ್ತಿದ್ದಾನೆ. ಈ ವಿಕೃತನ ಕಳ್ಳತನದ ದೃಶ್ಯ ಈಗ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ನಗರದ ನಾಗರಿಕರು ಬೆಚ್ಚಿಬಿದ್ದಿದ್ದಾರೆ. ಪ್ರತಿಷ್ಠಿತರ ಮನೆಗಳೇ ಟಾರ್ಗೆಟ್ ಗಂಗಾವತಿಯ ಪ್ರತಿಷ್ಠಿತ ಬಡಾವಣೆಗಳಲ್ಲಿರುವ ಉದ್ಯಮಿಗಳು ಹಾಗೂ ಗಣ್ಯರ ಮನೆಗಳನ್ನೇ ಈ ಕಳ್ಳ ಗುರಿಯಾಗಿಸಿಕೊಂಡಿದ್ದಾನೆ. ಹಗಲು ವೇಳೆ ಸಂಚರಿಸಿ ಎಲ್ಲೆಲ್ಲಿ ಒಳ ಉಡುಪುಗಳನ್ನು ಒಣಹಾಕಲಾಗಿದೆ ಎಂಬುದನ್ನು ಗಮನಿಸುವ ಈತ ರಾತ್ರಿಯಾಗುತ್ತಿದ್ದಂತೆ ಕಾರ್ಯಾಚರಣೆಗೆ ಇಳಿಯುತ್ತಾನೆ. ಮನೆಯವರು ನಿದ್ದೆಗೆ ಜಾರಿದ ನಂತರ ಸದ್ದಿಲ್ಲದೆ ಕಂಪೌಂಡ್ ಹಾರಿ ಒಳಗೆ ನುಗ್ಗಿ, ಬಟ್ಟೆಗಳನ್ನು ಕದ್ದು ಪರಾರಿಯಾಗುತ್ತಿದ್ದಾನೆ.
ಕಳೆದ ಎರಡು ದಿನಗಳಿಂದ ಬಟ್ಟೆಗಳು ನಾಪತ್ತೆಯಾಗುತ್ತಿರುವುದನ್ನು ಗಮನಿಸಿದ ಮನೆಯವರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಈ ವಿಕೃತ ಮನಸ್ಸಿನವನ ಕೃತ್ಯ ಬಯಲಾಗಿದೆ. ವ್ಯಕ್ತಿಯೊಬ್ಬ ಕತ್ತಲಲ್ಲಿ ಕಂಪೌಂಡ್ ಹತ್ತಿ ಬಂದು ಬಟ್ಟೆಗಳನ್ನು ಆಯ್ದುಕೊಂಡು ಹೋಗುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ದಾಖಲಾಗಿವೆ. ಈ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮಹಿಳೆಯರ ಒಳ ಉಡುಪು ಕದಿಯೋ ಸೈಕೋ ಕಳ್ಳ ಕುಕೃತ್ಯ ಸಿಸಿಟಿವಿಯಲ್ಲಿ ಸೆರೆ ಇದು ಕೇವಲ ಕಳ್ಳತನವಲ್ಲ, ಇದೊಂದು ವಿಕೃತ ಮನಸ್ಥಿತಿಯ ಕೆಲಸ ಎಂದು ಜನ ಆತಂಕ ವ್ಯಕ್ತಪಡಿಸಿದ್ದಾರೆ. ಇಂತಹ ವ್ಯಕ್ತಿಗಳಿಂದ ಮುಂದಿನ ದಿನಗಳಲ್ಲಿ ಮಹಿಳೆಯರ ಸುರಕ್ಷತೆಗೆ ಧಕ್ಕೆ ಬರಬಹುದು ಎಂಬ ಭೀತಿ ಎದುರಾಗಿದೆ. ಆದ್ದರಿಂದ ಪೊಲೀಸರು ಕೂಡಲೇ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಈ ವ್ಯಕ್ತಿಯನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗಂಗಾವತಿ ನಗರದ ನಿವಾಸಿಗಳು ಒತ್ತಾಯಿಸಿದ್ದಾರೆ.