ಬಿಹಾರದ ನಳಂದ ಜಿಲ್ಲೆಯಲ್ಲಿ ಭೀಕರ ದುರಂತ ಸಂಭವಿಸಿದ್ದು, ಶೀತ್ಲಾ ದೇವಸ್ಥಾನದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಕನಿಷ್ಠ ಎಂಟು ಮಹಿಳೆಯರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ. ಮಂಗಳವಾರ ಚೈತ್ರ ಮಾಸದ ಕೊನೆಯ ಮಂಗಳವಾರದ ಪ್ರಯುಕ್ತ ಶೀತ್ಲಾ ಮಾತಾ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ದರ್ಶನಕ್ಕಾಗಿ ಉಂಟಾದ ಭಾರಿ ಜನಸಂದಣಿ ಹಾಗೂ ಅವ್ಯವಸ್ಥೆಯಿಂದಾಗಿ ಕಾಲ್ತುಳಿತದ ಪರಿಸ್ಥಿತಿ ನಿರ್ಮಾಣವಾಯಿತು. ಸರತಿ ಸಾಲು ಮುರಿದು ಭಕ್ತರು ಒಬ್ಬರ ಮೇಲೊಬ್ಬರು ಹತ್ತಿದ ಪರಿಣಾಮ ಗೊಂದಲ ಹೆಚ್ಚಾಗಿ, ಎಂಟು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಪೊಲೀಸರು ಮತ್ತು ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.ಈ ದುರಂತದ ಬಳಿಕ ದೇವಸ್ಥಾನ ಆಡಳಿತ ಮತ್ತು ಭದ್ರತಾ ವ್ಯವಸ್ಥೆಯ ಕೊರತೆ ಬಗ್ಗೆ ಪ್ರಶ್ನೆಗಳು ಕೇಳಿಬರುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.