ಬೆರೊಬ್ಬ ಯುವಕನ ಮೋಹದ ಬಲೆಗೆ ಬಿದ್ದ ಪತ್ನಿ ತನ್ನ ಪ್ರೀತಿಗೆ ಅಡ್ಡಿಯಾದ ಗಂಡನನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿದ್ದಾಳೆ. ಈ ಭೀಕರ ಘಟನೆ ನಡೆದಿರುವುದು ಯಾದಗಿರಿ ಜಿಲ್ಲೆಯ ಚಾಮನಹಳ್ಳಿಯಲ್ಲಿ. ಪೂಜಾ ಹಾಗೂ ಸಾಗರ್ ಯಾದಗಿರಿ ತಾಲೂಕಿನ ಚಾಮನಹಳ್ಳಿ ತಾಂಡದಲ್ಲಿ ವಾಸವಿದ್ದರು. ಸಾಗರ್ ಆಟೋ ಚಲಾಯಿಸುತ್ತಿದ್ದ. ಪತ್ನಿ ಪೂಜಾ ಅದೇ ಊರಿನ ರೆಡ್ಡಿ ರಾಥೋಡ್ ಎಂಬ ಯುವಕನೊಂದಿಗೆ ಕಳೆದ ಮೂರು ವರ್ಷದಿಂದ ಅಕ್ರಮ ಸಂಬಂಧವಿತ್ತು. ಮೂರು ಬಾರಿ ಪೂಜಾ ತನ್ನ ಪ್ರಿಯತಮನ ಜೊತೆ ಓಡಿ ಹೋಗಿದ್ದಳು. ಪಂಚಾಯತಿ ಮಾಡಿ ಬುದ್ಧಿ ಹೇಳಿದರೂ ಇವರ ಕಾಮದಾಟ ನಿಂತಿರಲಿಲ್ಲ. ಕೊನೆಗೆ ದಾರಿಗೆ ಅಡ್ಡವಾಗಿದ್ದ ಸಾಗರ್‌ನನ್ನು ಮುಗಿಸಲು ಪತ್ನಿ ಮತ್ತು ಪ್ರಿಯತಮ ಸ್ಕೆಚ್ ಹಾಕಿದ್ದರು.
ಪ್ರಿಯತಮ ರೆಡ್ಡಿ ರಾಠೋಡ್, ಸಾಗರ್‌ನನ್ನು ಕೊಲ್ಲಲು ಮಹೇಶ್ ಎಂಬಾತನಿಗೆ 1 ಲಕ್ಷ ರೂ. ಸುಪಾರಿ ನೀಡಿದ್ದು, ಮಾರ್ಚ್ 22ರ ರಾತ್ರಿ ಬಾಡಿಗೆ ಇದೆ ಎಂದು ಸುಳ್ಳು ಹೇಳಿ ಸಾಗರ್‌ನನ್ನು ಆಟೋ ಸಮೇತ ಕರೆಸಿಕೊಂಡು, ಲಿಂಗೇರಿ ಬಳಿ ನಿರ್ಜನ ಪ್ರದೇಶದಲ್ಲಿ ಸಾಗರ್ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಕೊಲೆಯಾದ ನಂತರ ಮೃತದೇಹವನ್ನು ಕಾರಿನಲ್ಲಿ ಹಾಕಿಕೊಂಡು ಹೊಸಹಳ್ಳಿ ಬಳಿ ತಂದು, ಅಲ್ಲಿ ಆಟೋಗೆ ಕಾರಿನಿಂದ ಡಿಕ್ಕಿ ಹೊಡೆಸಲಾಯಿತು. ಸಾಗರ್ ಅಪಘಾತದಿಂದ ಸತ್ತಿದ್ದಾನೆ ಎಂದು ಬಿಂಬಿಸಲು ಹೋಗಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.