2026-04-23 10:50:18

West Bengal Election | ಮಮತಾ vs ಸುವೇಂದು ಭವಾನಿಪುರ ಪ್ರತಿಷ್ಠೆಯ ಕಣ | Speed News Kannada

West Bengal Election | ಮಮತಾ vs ಸುವೇಂದು ಭವಾನಿಪುರ ಪ್ರತಿಷ್ಠೆಯ ಕಣ | Speed News Kannada

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಣ ರಂಗೇರಿದೆ. ಭವಾನಿಪುರ ವಿಧಾನಸಭಾ ಕ್ಷೇತ್ರದಿಂದ ಹಾಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ವರಿಷ್ಠ ಸುವೇಂದು ಅಧಿಕಾರಿ ಸ್ಪರ್ಧಿಸುತ್ತಿದ್ದು, ಟಿಎಂಸಿಯಿಂದ ತಾವೇ ಅಭ್ಯರ್ಥಿಯಾಗುವ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇರ ಹಣಾಹಣಿಗೆ ಅಖಾಡಕ್ಕಿಳಿದಿದ್ದಾರೆ. ಇದರೊಂದಿಗೆ ಬಿಜೆಪಿಯ ಜಾತಿ ಲೆಕ್ಕಾಚಾರದ ಜೊತೆಗೆ ಭವಾನಿಪುರ ವಿಧಾನಸಭಾ ಕ್ಷೇತ್ರ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದು, ಇಡೀ ರಾಷ್ಟ್ರದ ಗಮನ ಸೆಳೆದಿದೆ. ಪಶ್ಚಿಮ ಬಂಗಾಳ ಚುನಾವಣೆ| ಭವಾನಿಪುರ-ನಂದಿಗ್ರಾಮ: 10 ಹೈಪ್ರೋಫೈಲ್ ಕ್ಷೇತ್ರಗಳಿವು ಅಮಿತ್ ಶಾ ಎಸಗಿರುವ ಕೃತ್ಯಗಳಿಗೆ ಆರೋಪಪಟ್ಟಿ ದಾಖಲಿಸಬೇಕು: ಮಮತಾ ಬ್ಯಾನರ್ಜಿ ಮಮತಾ ಅವರು ದೀರ್ಘಕಾಲದಿಂದ ಹಿಡಿದಿಟ್ಟಿರುವ ಭವಾನಿಪುರ ಭದ್ರಕೋಟೆಗೆ ಬಿಜೆಪಿಯ ಸುವೇಂದು ಅಧಿಕಾರಿ ಎಂಟ್ರಿ ಕೊಡುವುದರಿಂದ ತೀವ್ರ ಪೈಪೋಟಿ ನಿರೀಕ್ಷೆ ಮಾಡಲಾಗಿದ್ದು, ರಾಜ್ಯದ ಪಾಲಿಗೆ 'ಎಕ್ಸ್' ಫಾಕ್ಟರ್ ಎನಿಸಿದೆ.
ದಕ್ಷಿಣ ಕೋಲ್ಕತ್ತದಲ್ಲಿ ತನ್ನ ಭದ್ರಕೋಟೆ ಉಳಿಸಿಕೊಳ್ಳಲು ತೃಣಮೂಲ ಕಾಂಗ್ರೆಸ್ ಯತ್ನಿಸುತ್ತಿದ್ದು, ಈ ಎಲ್ಲ ಯತ್ನಗಳನ್ನು ವಿಫಲಗೊಳಿಸಲು ಬಿಜೆಪಿ ಪಣತೊಟ್ಟಿದೆ. ಪ್ರಸ್ತುತ ಪೈಪೋಟಿಯು 2021ರ ವಿಧಾನಸಭಾ ಚುನಾವಣೆಯಲ್ಲಿ ಬ್ಯಾನರ್ಜಿ ಹಾಗೂ ಅಧಿಕಾರಿ ನಡುವಣ ಹೋರಾಟವನ್ನು ನೆನಪಿಸುತ್ತದೆ. ಅಂದು ಮಮತಾ ಅವರು ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ ಅವರ ಸವಾಲನ್ನು ಎದುರಿಸಿದ್ದರು.
ಆದರೆ ಸುವೇಂದು ಅವರ ತವರಿನಲ್ಲಿ ಮಮತಾ ಕೇವಲ 1,956 ಮತಗಳ ಅಂತರರಿಂದ ಪರಾಭವಗೊಂಡಿದ್ದರು. ಮತ್ತೊಂದೆಡೆ ಬಿಜೆಪಿ ಮಣಿಸಿದ್ದ ಟಿಎಂಸಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿತ್ತು. ಬಳಿಕ ಭವಾನಿಪುರ ಉಪಚುನಾವಣೆಯಲ್ಲಿ ಮಮತಾ ಗೆಲುವು ದಾಖಲಿಸಿದ್ದರು. ಐದು ವರ್ಷಗಳ ಬಳಿಕ ಈಗ ರಾಜಕೀಯ ಚಿತ್ರಣ ಬದಲಾಗಿದ್ದರೂ ಫಲಿತಾಂಶವೂ ಬದಲಾಗುವುದೇ ಎಂದು ಕಾದು ನೋಡಬೇಕಿದೆ. ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ ಚುನಾವಣೆ ನಡೆಯುತ್ತಿರುವುದರಿಂದ ರಾಜಕೀಯ ವಲಯಗಳಲ್ಲಿ ಹೆಚ್ಚಿನ ಕುತೂಹಲ ಮನೆ ಮಾಡಿವೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.