ನವದೆಹಲಿ: ಭಾರತ ಮತ್ತು ಅಮೆರಿಕ ಮೊದಲ ಹಂತದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಜಂಟಿ ಹೇಳಿಕೆಗೆ ನಾಲ್ಕೈದು ದಿನಗಳಲ್ಲಿ ಸಹಿ ಹಾಕಲಾಗುವುದು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಜಂಟಿ ಒಪ್ಪಂದದ ಹೇಳಿಕೆಗೆ ಸಹಿ ಹಾಕಿದ ನಂತರ, ಭಾರತದ ಸರುಕುಗಳ ಮೇಲಿನ ಸುಂಕವನ್ನು ಶೇ. 59ರಿಂದ ಶೇ. 18ಕ್ಕೆ ಇಳಿಸುವ ಕುರಿತು ಅಮೆರಿಕ ಕಾರ್ಯಕಾರಿ ಆದೇಶವನ್ನು ಹೊರಡಿಸಲಿದೆ. ಒಪ್ಪಂದದ ಮೊದಲ ಕಂತಿನ ಕಾನೂನು ಒಪ್ಪಂದಕ್ಕೆ ಮಾರ್ಚ್ ಮಧ್ಯದ ವೇಳೆಗೆ ಸಹಿ ಹಾಕುವ ನಿರೀಕ್ಷೆಯಿದೆ. ಜಂಟಿ ಹೇಳಿಕೆಯ ನಂತರ ಸಮಗ್ರ ಕಾನೂನು ಒಪ್ಪಂದ ನಡೆಯಲಿದೆ. ಈ ಒಪ್ಪಂದದಲ್ಲಿ ಯಾವುದೇ ಹೂಡಿಕೆ ಬದ್ಧತೆ ಇಲ್ಲ ಎಂದು ಗೋಯಲ್ ತಿಳಿಸಿದ್ದಾರೆ.
ಜಂಟಿ ಹೇಳಿಕೆಗೆ ಸಹಿ ಹಾಕಿದ ನಂತರ ಮಾರ್ಚ್ ಮಧ್ಯಭಾಗದಲ್ಲಿ ಕಾನೂನು ಒಪ್ಪಂದವಾಗಿ ಪರಿವರ್ತನೆಯಾಗಲಿದೆ. ಕಾನೂನು ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕುವ ನಿರೀಕ್ಷೆ ಇದೆ ಎಂದು ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ ವಾಲ್ ತಿಳಿಸಿದ್ದಾರೆ.
ಪ್ರಸ್ತುತ, ಭಾರತೀಯ ಸರಕುಗಳ ಮೇಲೆ ಶೇ. 25ರಷ್ಟು ಪ್ರತಿಸುಂಕ ಮತ್ತು ರಷ್ಯಾದ ತೈಲ ಖರೀದಿಸುತ್ತಿರುವ ಹಿನ್ನೆಲೆಯಲ್ಲಿ ಶೇ. 25ರಷ್ಟು ಹೆಚ್ಚುವರಿ ದಂಡರೂಪದ ಸುಂಕ ಸೇರಿ ಶೇ 50ರಷ್ಟು ಸುಂಕವನ್ನು ಅಮೆರಿಕ ವಿಧಿಸುತ್ತಿದೆ.