2026-03-07 07:17:31

Three crore rupees that were supposed to be deposited in the ATM | ಎಟಿಎಂಗೆ ಹಾಕಬೇಕಿದ್ದ ಮೂರು ಕೋಟಿ ರೂ ನಾಪತ್ತೆ ಆಡಿಟ್ ವೇಳೆ ಸಿಬ್ಬಂದಿಯ ಕಳ್ಳಾಟ ಬಯಲು | Speed News Kannada

Three crore rupees that were supposed to be deposited in the ATM | ಎಟಿಎಂಗೆ ಹಾಕಬೇಕಿದ್ದ ಮೂರು ಕೋಟಿ ರೂ ನಾಪತ್ತೆ ಆಡಿಟ್ ವೇಳೆ ಸಿಬ್ಬಂದಿಯ ಕಳ್ಳಾಟ ಬಯಲು | Speed News Kannada

ಹಾಸನ, ಫೆಬ್ರವರಿ 21: ಜಿಲ್ಲೆಯಲ್ಲಿ ಎಟಿಎಂಗೆ ಹಣ ತುಂಬುವ ಖಾಸಗಿ ಸಂಸ್ಥೆಯಲ್ಲಿ ಭಾರೀ ಹಣ ದುರುಪಯೋಗ ಪ್ರಕರಣ ಬಯಲಾಗಿದ್ದು, ಮೂರು ಕೋಟಿಗೂ ಹೆಚ್ಚು ಹಣ ನಾಪತ್ತೆಯಾಗಿದೆ ಎಂದು ಹೇಳಲಾಗಿದೆ. ಪೆಬ್ರವರಿ 18 ಮತ್ತು 19ರಂದು ಸಂಸ್ಥೆಯಲ್ಲಿ ನಡೆಸಿದ ಮಾಸಿಕ ಆಡಿಟ್ ವೇಳೆ ಈ ಅವ್ಯವಹಾರ ಬೆಳಕಿಗೆ ಬಂದಿದ್ದು, ಹಾಸನ ಬಡಾವಣೆ ಠಾಣೆ ಪೊಲೀಸರು ಎಫ್‌ಐಆ‌ರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿದ್ದ ಸಿಬ್ಬಂದಿ!
ಎಟಿಎಂಗಳಿಗೆ ಹಣ ತುಂಬುವ ಜವಾಬ್ದಾರಿಯಲ್ಲಿದ್ದ ಖಾಸಗಿ ಸಂಸ್ಥೆಯ ಸಿಬ್ಬಂದಿಗಳಾದ ನಂದೀಶ್ ಬಿ.ಎಲ್ ಹಾಗೂ ಮಧುಕುಮಾರ್ ಎಂ.ಪಿ ವಿರುದ್ಧ ಸುಮಾರು 3 ಕೋಟಿ 40 ಲಕ್ಷ 28 ಸಾವಿರ ರೂ. ಲಪಟಾಯಿಸಿದ ಆರೋಪ ಕೇಳಿಬಂದಿದೆ. 11 ಕೆನರಾ ಬ್ಯಾಂಕ್ ಎಟಿಎಂ,3 ಎಸ್ ಬಿ ಐ ಎಟಿಎಂ ಮತ್ತು 1 ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಸೇರಿ ಒಟ್ಟೂ 18 ಎಟಿಎಂಗಳಿಗೆ ಹಣ ಜಮಾ ಮಾಡಿದಂತೆ ಕೃತಕ ದಾಖಲೆ ಸೃಷ್ಟಿಸಿ, ವಾಸ್ತವವಾಗಿ ಹಣ ಜಮಾ ಮಾಡದೆ ದುರುಪಯೋಗ ಮಾಡಿಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಾಸನ ನಗರ ವ್ಯಾಪ್ತಿಯ ವಿವಿಧ ಎಟಿಎಂ ಗೆ ಹಣವನ್ನೇ ಹಾಕದೆ ಹಣ ಹಾಕಿರೋದಾಗಿ ರೆಸಿಪ್ಟ್ ತೆಗೆದು ವಂಚನೆ ಆರೋಪ ಹಿನ್ನೆಲೆ ಸಿಎಂಎಸ್ ಸಂಸ್ಥೆಯ ಹಾಸನ ಶಾಖೆ ವ್ಯವಸ್ಥಾಪಕ ರಾಜು ಹಾಸನ ಬಡಾವಣೆ ಠಾಣೆಯಲ್ಲಿ ದೂರು ನೀಡಿದ್ದು, ಅದರ ಆಧಾರದ ಮೇಲೆ ಎಫ್‌ಐಆ‌ರ್ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ವಿರುದ್ಧ ತನಿಖೆ ಆರಂಭಿಸಿದ್ದಾರೆ.

ಈ ಹಿಂದೆಯೂ ನಡೆದಿತ್ತು ಅವ್ಯವಹಾರ
ಕೆಲ ತಿಂಗಳ ಹಿಂದೆಯಷ್ಟೇ ಸುಮಾರು 7.11 ಕೋಟಿ ರೂಪಾಯಿ ದೋಚಲ್ಪಟ್ಟಿತ್ತು. ಇನ್ನೋವಾ ಕಾರಿನಲ್ಲಿ ಬಂದಿದ್ದ ಗ್ಯಾಂಗ್, ಎಟಿಎಂಗೆ ಹಣ ತುಂಬಲು ತೆರಳುತ್ತಿದ್ದ ವಾಹನವನ್ನು ಜಯದೇವ ಡೇರಿ ಸರ್ಕಲ್ ಸಮೀಪ ತಡೆದು, ನಗದು ಕಸಿದು ಪರಾರಿಯಾಗಿದ್ದರು. ಇದೇ ರೀತಿಯಲ್ಲಿ, ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಟಿಎಂಗಳಿಗೆ ಜಮಾ ಮಾಡಬೇಕಿದ್ದ 1 ಕೋಟಿಗೂ ಅಧಿಕ ಹಣವನ್ನು ಕಂಪನಿ ಸಿಬ್ಬಂದಿಯೇ ದುರುಪಯೋಗ ಮಾಡಿಕೊಂಡ ಘಟನೆ ಜನವರಿಯಲ್ಲಿ ಬೆಳಕಿಗೆ ಬಂದಿತ್ತು.
ಎರಡು ತಂಡಗಳಿಗೆ ಹಂಚಿಕೆ ಮಾಡಲಾಗಿದ್ದ ನಗದುಗಳಲ್ಲಿ ಒಂದು ತಂಡವು ಸುಮಾರು 57 ಲಕ್ಷ ರೂ. ಹಾಗೂ ಮತ್ತೊಂದು ತಂಡವು 80 ಲಕ್ಷ ರೂ. ಹಣದೊಂದಿಗೆ ಪರಾರಿಯಾಗಿದ್ದರು ಎಂದು ಹೇಳಲಾಗಿತ್ತು. ಎಟಿಎಂಗಳಲ್ಲಿ ಹಣ ಜಮಾ ಆಗದಿರುವುದು ಗೊತ್ತಾದ ನಂತರ ಕಂಪನಿ ಅಧಿಕಾರಿಗಳು ಪರಿಶೀಲನೆ ನಡೆಸಿ ದೂರು ನೀಡಿದ್ದರು. ಈಗ ಮತ್ತೊಮ್ಮೆ ಇಂತದ್ದೇ ಪ್ರಕರಣ ಬಯಲಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.