ಬೆಂಗಳೂರು: ಅಡುಗೆಯ ವಿಚಾರಕ್ಕೆ ಅತ್ತೆಯೊಂದಿಗೆ ಜಗಳ ಏರ್ಪಟ್ಟ ನಂತರ 35 ವರ್ಷದ ಮಾಜಿ ಮಹಿಳಾ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡ 1 ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಸುಷ್ಮಾ (35) ಎಂದು ಗುರುತಿಸಲಾಗಿದೆ. ಸುಷ್ಮಾ ಈ ಹಿಂದೆ ಡೆಲ್ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಐದು ವರ್ಷಗಳ ಹಿಂದೆ ಸುಷ್ಮಾ ಪುನೀತ್ ಕುಮಾರ್ ಎಂಬುವವರನ್ನು ಮದುವೆಯಾಗಿದ್ದು, ದಂಪತಿಗೆ ನಾಲ್ಕು ವರ್ಷದ ಮಗನಿದ್ದಾನೆ.
ಪೊಲೀಸರ ಪ್ರಕಾರ ಸುಷ್ಮಾ ಪತಿಯ ಮನೆಯಲ್ಲಿ ಆಗಾಗ ಸಣ್ಣಪುಟ್ಟ ವಿಚಾರಗಳಿಗೆ ಜಗಳಗಳು ನಡೆಯುತ್ತಿತ್ತು. ನಿನ್ನೆ ಮಂಗಳವಾರ ಸುಷ್ಮಾ ಮತ್ತು ಆಕೆಯ ಅತ್ತೆ ಕಲ್ಪನಾ ನಡುವೆ ಅಡುಗೆ ಮಾಡುವ ವಿಚಾರದಲ್ಲಿ ಜಗಳ ಏರ್ಪಟ್ಟಿತ್ತು. ಜೊತೆಗೆ ಇತರ ವಿಷಗಳಿಗೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಇದರಿಂದ ಮನನೊಂದ ಸುಷ್ಮಾ ಮಂಗಳವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿ ಸುಷ್ಮಾ ಅವರ ಕುಟುಂಬದವರು ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಆಕೆಯ ಪತಿಯನ್ನು ಬಂಧಿಸಿದ್ದಾರೆ. ಪ್ರಸ್ತುತ ಅತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.